ಶಿವಮೊಗ್ಗ: ಪ್ರಣವಾನಂದ ಸ್ವಾಮೀಜಿ ಅವರು ನಮ್ಮ ಸಮಾಜದವರಾ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಮಧು ಬಂಗಾರಪ್ಪನವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಪ್ರಣವಾನಂದ ಸ್ವಾಮೀಜಿ ಅವರು ಬೆಂಗಳೂರಿನಲ್ಲಿ ಕಮಿಷನರ್ ಗೆ ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಪ್ರಣವಾನಂದ ಅವರು ಕಣ್ಣೀರು ಏಕೆ ಹಾಕಿದ್ದಾರೆ. ಅವರೇನು ತಪ್ಪು ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ನನ್ನ ವಿರುದ್ಧ ದೂರು ನೀಡುವ ಸಾಕಷ್ಟು ಜನರನ್ನು ನೋಡಿದ್ದೇನೆ. ಇಂತಹವರು ಬುರುಡೆ ಬಿಟ್ಟುಕೊಂಡೇ ಬಂದಿದ್ದಾರೆ. ಕಳ್ಳತನ ಮಾಡಿದ್ರೆ, ತಪ್ಪು ಮಾಡಿದ್ರೆ ಕಣ್ಣೀರು ಹಾಕೋದು ಅಲ್ವಾ. ಇಂತಹ ಪ್ರಶ್ನೆ ಕೇಳಿ ಸುಮ್ಮನೆ ನನ್ನ ಟೈಮ್ ವೇಸ್ಟ್ ಮಾಡಬೇಡಿ, ಅವರು ನಮ್ಮ ಸಮಾಜದವರೇ ಅಲ್ಲಾ, ಅವರೇನು ಈಡಿಗ ಸಮಾಜದವರಾ ಎಂದರು. ನಾನೇನು ಅವರ ಜಾತಕ ನೋಡಿಕೊಂಡು ಇರಬೇಕಾ. ಅವರ ಹಿನ್ನೆಲೆ ಕೆದಕಿ ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದರು.
ನನ್ನ ವಿರುದ್ಧ ಕಮೀಷನರ್, ಸ್ಪೀಕರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾರಿಗೆ ಬೇಕಾದರೂ ದೂರು ಕೊಡಲಿ, ನಾನು ಹೆದರುವುದಿಲ್ಲ ಎಂದ ಅವರು, ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಇಂತಹ ಹೇಳಿಕೆಗಳಿಂದ ಸ್ವಾಮೀಜಿ ಅವರು ಸುಮ್ಮನೆ ಪಬ್ಲಿಸಿಟಿ ತಗೊಳ್ಳುತ್ತಾರೆ. ಇಂತಹವರಿಗೆಲ್ಲಾ ಏಕೆ ಪ್ರಚಾರ ಕೊಡ್ತೀರಾ? ನೀವುಗಳು ಇದನ್ನೆಲ್ಲಾ ಹಾಕೋದು ನಿಲ್ಲಿಸಿ ಎಂದು ಮನವಿ ಮಾಡಿದರು.
ಇವರಿಗೆಲ್ಲಾ ಪ್ರಚಾರ ಕೊಡಲು ನನಗೆ ಇಷ್ಟವಿಲ್ಲ. ಇವರೆಲ್ಲಾ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಇದೆ. ಅಲ್ಲಿಗೆ ಹೋಗಿ ಕೇಳಿಕೊಳ್ಳಲಿ. ನಾನು ಮನುಷ್ಯ ಜಾತಿಯಲ್ಲಿ ಇರುವವನು. ಸ್ವಾಮೀಜಿಗಳೆಂದ್ರೆ ಒಂದು ಗಾಂಭೀರ್ಯ ಇರುತ್ತದೆ ಎಂದು ಹೇಳಿದರು.
ಬಿ ಕೆ ಹರಿಪ್ರಸಾದ್ ಹಿರಿಯರು: ಕಾಂಗ್ರೆಸ್ನ ಪ್ರಮುಖರಾದ ಬಿ ಕೆ ಹರಿಪ್ರಸಾದ್ ಅವರು ಹಿರಿಯರಿದ್ದಾರೆ. ಅವರಿಗೆ ಸ್ಥಾನಮಾನ ಕೊಡಬೇಡಿ ಅನ್ನೋಕೆ ನಾನು ಯಾರು. ಅದನ್ನೆಲ್ಲಾ ಪಕ್ಷ ನೋಡಿಕೊಳ್ಳುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕೃಷಿ ಸಚಿವರಿಗೆ ಮನವಿ: ಈ ಬಾರಿ ಮಳೆ ಆಗಬೇಕಿತ್ತು, ನಿರೀಕ್ಷೆ ಕೂಡ ಇತ್ತು. ಆದರೂ, ವರುಣ ಕೈಕೊಟ್ಟಿದ್ದಾನೆ. ಗಣೇಶ ಹಬ್ಬದ ನಂತರ ಮಳೆ ಆಗುತ್ತಾ ಎಂದು ಕಾದು ನೋಡೋಣ. ಜಿಲ್ಲೆಯನ್ನು ಬರದ ಪಟ್ಟಿಗೆ ಸೇರಿಸುವಂತೆ ನಾನು ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕಾವೇರಿ ನೀರು ಹರಿಸುವ ವಿಚಾರದ ಕುರಿತು ಮಾತನಾಡಿ, ಇದಕ್ಕೆ ಸಂಬಂಧಿಸಿದಂತೆ ನೀರು ನಿರ್ವಹಣಾ ಪ್ರಾಧಿಕಾರದವರು ತೀರ್ಮಾನ ಮಾಡುತ್ತಾರೆ. ಅಲ್ಲಿ ಕೆಲವು ಕಾನೂನುಗಳು ಇರುತ್ತವೆ. ಆ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ ಎಂದರು.
ಇದನ್ನೂಓದಿ: ಪಾರ್ಕಿಂಗ್ ಜಾಗದಲ್ಲಿ ಮದ್ಯ ಸೇವನೆ ಬೇಡ ಎಂದಿದ್ದಕ್ಕೆ ಹೋಟೆಲ್ ನೇಮ್ ಪ್ಲೇಟ್ ಧ್ವಂಸ: ಶಿವಮೊಗ್ಗದಲ್ಲಿ ದೂರು ದಾಖಲು