ಶಿವಮೊಗ್ಗ: ನಿನ್ನೆ ವೆಂಕಟೇಶನಗರದ ಎ.ಎನ್.ಕೆ. ರಸ್ತೆಯಲ್ಲಿ ವಿಜಯ್ ಎಂಬಾತನ ಕೊಲೆ ಪ್ರಕರಣದ ಆರೋಪಿಯೋರ್ವನ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಕೊಲೆ ಪ್ರಕರಣದಲ್ಲಿ ಜಬಿ(21), ಕಾರ್ತಿಕ್ ಅಲಿಯಾಸ್ ಕಟ್ಟೆ ಕಾರ್ತಿಕ್(21) ಹಾಗೂ ದರ್ಶನ(21) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಂಧಿತ ಮೂವರು ಆರೋಪಿಗಳು ಸುಲಿಗೆ ಸೇರಿದಂತೆ ಅನೇಕ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಬಂಧಿತರು ವಿಜಯ್ನನ್ನು ಕೊಲೆ ಮಾಡಿ, ಬಂಗಾರದ ಸರವನ್ನು ತೆಗೆದುಕೊಂಡು ಹೋಗಿದ್ದರು ಎನ್ನಲಾಗ್ತಿದೆ.
ಬಂಧಿತರು ಕೊಲೆಗೆ ಬಳಸಿದ ಚಾಕುವನ್ನು ಅಡಗಿಸಿಟ್ಟಿದ್ದ ಸಾಗರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಹಿಂಭಾಗದ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪೊಲೀಸರು ಸ್ಥಳ ಮಹಜರು ಮಾಡುವಾಗ ಜಬಿ ಕರ್ತವ್ಯದಲ್ಲಿದ್ದ ರೋಷನ್ ಎಂಬ ಕಾನ್ಸಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಕಾನ್ಸ್ಟೇಬಲ್ ರೋಷನ್ ಕೈಗೆ ಗಾಯವಾಗಿದೆ.
ಈ ಸಂದರ್ಭ ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ಅವರು ತಮ್ಮ ಸಿಬ್ಬಂದಿ ರಕ್ಷಣೆಗಾಗಿ ಜಬಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ರೋಷನ್ ಹಾಗೂ ಜಬಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಷನ್ ಅನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಗಿದೆ. ಆಸ್ಪತ್ರೆಗೆ ಎಸ್ಪಿ ಮಿಧುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ: ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ