ಶಿವಮೊಗ್ಗ: ಬಂಧಿಸಿ ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸುವ ಮೂಲಕ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಲಕ್ಷ್ಮಣ್ ಸೈನಾದಿ ಎಂಬಾತ ಶಿವಮೊಗ್ಗ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ. ಆತ ಬೆಂಗಳೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ತಂಡವು ಬಂಧಿಸಿ ಇಂದು ಕರೆತರುವಾಗ ಶಿವಮೊಗ್ಗದ ಹೊರ ವಲಯದಲ್ಲಿ ಮೂತ್ರ ವಿಸರ್ಜನೆಗೆಂದು ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ರೌಡಿ ನಿಗ್ರಹ ದಳದ ಹೆಡ್ ಕಾನ್ಸ್‌ಟೇಬಲ್ ಹರ್ಷ ಹಿಡಿಯಲು ಹೋದಾಗ ಅವರ ಮೇಲೆ ಕೈಗೆ ಹಾಕಿದ್ದ ಚೈನ್ನಲ್ಲಿಯೇ ಹೊಡೆದು ಪರಾರಿಯಾಗಲು ಪ್ರಯತ್ನಿಸಿದ್ದ. ಆಗ ರೌಡಿ ನಿಗ್ರಹ ದಳದ ಸಿಪಿಐ ಗುರುರಾಜ್ ಕರ್ಕಿ ಅವರು ರೌಡಿಯ ಎಡ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಶಾಂತರಾಜು ತಿಳಿಸಿದ್ದಾರೆ.
ಗುಂಡು ಹಾರಿಸಿದ ತಕ್ಷಣ ಕೆಳಗೆ ಬಿದ್ದ ಲಕ್ಷ್ಮಣ್ನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಲ್ಲಿ ಮೂಳೆ ವೈದ್ಯರು ಇರದ ಕಾರಣ ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯ ಪೇದೆ ಹರ್ಷ ಅವರ ಎಡಗೈಗೆ ಗಾಯವಾಗಿದ್ದು, ಅವರಿಗೂ ಸಹ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಕೊನೆ ತನಕ ಲೋಕಿ ಪರವಾಗಿ ಕೆಲಸ ಮಾಡ್ತೇನೆ:
ಸ್ಕ್ಯಾನ್ ಹಾಗೂ ಎಕ್ಸ್ರೇಗೆಂದು ಆಸ್ಪತ್ರೆಗೆ ಕರೆ ತಂದಾಗ ಪೊಲೀಸರು ನನ್ನ ತಲೆಗೆ ಹೊಡೆಯುತ್ತಾರೆ ಅಂದುಕೊಂಡಿದ್ದೆ, ಆದ್ರೆ ಕಾಲಿಗೆ ಹೊಡೆದಿದ್ದಾರೆ. ನಾನು ಕೊನೆವರೆಗೂ ರೌಡಿಶೀಟರ್ ಲೋಕಿ ಪರವೇ ಕೆಲಸ ಮಾಡ್ತೇನೆ ಎಂದಿದ್ದಾನೆ ರೌಡಿ ಶೀಟರ್ ಸೈನಾದಿ.
ಹಲವು ಪ್ರಕರಣ:
ಲಕ್ಷ್ಮಣ್ ಸೈನಾದಿಯು 2006 ರ ರೌಡಿ ಸಹೋದರರಾದ ಲವ-ಕುಶ ಕೊಲೆ ಪ್ರಕರಣ, 2016 ರಲ್ಲಿ ಹೊಸಮನೆಯಲ್ಲಿ ನಡೆದ ಮೋಟಿ ವೆಂಕಟೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. 2017ರಲ್ಲಿ ಈತನ ಮೇಲೆ ಕೋಕಾ ಕೇಸ್ ಹಾಕಲಾಗುತ್ತದೆ ಹಾಗೂ 2018ರ ಮಾರ್ಕೆಟ್ ಗಿರಿ ಪ್ರಕರಣದಲ್ಲಿ ಈಗ ಭಾಗಿಯಾಗಿದರುವ ಆರೋಪ ಎದುರಿಸುತ್ತಿದ್ದಾನೆ.
ಈತನ ಹುಡುಕಾಟಕ್ಕೆ ಪೊಲೀಸರು ಯತ್ನ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ರೌಡಿ ನಿಗ್ರಹ ದಳ ರಚನೆಯಾದ ಮೇಲೆ ಜಿಲ್ಲೆಯಲ್ಲಿ ಇದು ಎರಡನೇ ಫೈರಿಂಗ್ ಪ್ರಕರಣವಾಗಿದೆ. ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಗಳನ್ನು ಕಳೆದ ವರ್ಷ ನವೆಂಬರ್ನಲ್ಲಿ ರಚನೆಯಾದ ರೌಡಿ ನಿಗ್ರಹದಳ ಹುಡುಕಲು ಪ್ರಾರಂಭಿಸಿತ್ತು. ಕಳೆದ ತಿಂಗಳು 12ರಂದು ಮೂರು ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಮಾರ್ಕೆಟ್ ಲೋಕಿಯನ್ನು ಬಂಧಿಸಿ ಸ್ಥಳ ಮಹಜರು ಮಾಡುವಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಮೇಲೂ ಫೈರಿಂಗ್ ಮಾಡಲಾಗಿತ್ತು.