ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಫೆಬ್ರವರಿ 27 ರಂದು ಲೋಕಾರ್ಪಣೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದು, ನೂತನ ವಿಮಾನ ನಿಲ್ದಾಣ ನವವಧುವಿನಂತೆ ಸಿಂಗಾರಗೊಂಡಿದೆ.
ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದ ವ್ಯಾಪ್ತಿಯಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 775 ಎಕರೆ ಪ್ರದೇಶದಲ್ಲಿ 449.22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಟಿಆರ್ 72 ನಿಂದ ಪ್ರಾರಂಭವಾಗಿ ಏರ್ ಬಸ್ 320ರ ವರೆಗೆ ಎಲ್ಲಾ ರೀತಿಯ ವಿಮಾನಗಳು ಹಗಲು ಹಾಗೂ ರಾತ್ರಿ ಕಾರ್ಯಾಚರಣೆ ಮಾಡುವಂತೆ ನಿರ್ಮಾಣ ಮಾಡಲಾಗಿದೆ. 3.2 ಕಿಲೋ ಮೀಟರ್ನ ರನ್ ವೇ ಇದೆ. ಇದು ಬೆಂಗಳೂರು ಹೂರತು ಪಡಿಸಿದರೆ ಎರಡನೇ ಅತಿ ದೊಡ್ಡ ರನ್ ವೇ ಆಗಿದೆ. 3,050 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲ ಹೊಂದಿದೆ.
ಮುಂಭಾಗದಿಂದ ಕಮಲ, ಹಿಂಭಾಗದಿಂದ ಹದ್ದು: ಶಿವಮೊಗ್ಗದ ವಿಮಾನ ನಿಲ್ದಾಣವು ಮುಂಭಾಗದಲ್ಲಿ ಕಮಲ ಮತ್ತು ಹಿಂಭಾಗದಲ್ಲಿ ಹದ್ದು ಪಕ್ಷಿಯ ಆಕಾರವನ್ನು ಹೊಂದಿದೆ. ಅತ್ಯಂತ ನೈಪುಣ್ಯತೆಯಿಂದ ಏರ್ಪೋರ್ಟ್ನಿರ್ಮಾಣ ಮಾಡಲಾಗಿದ್ದು, ಟರ್ಮಿನಲ್ ಕಟ್ಟಡವು 106 ಮೀಟರ್ ಉದ್ದ, 66 ಮೀಟರ್ ಅಗಲ ಹೊಂದಿದೆ. ಇದು ಗೋಪುರ ಮಾದರಿಯಲ್ಲಿ ಬಂದಿದ್ದು, ಟರ್ಮಿನಲ್ನ ಬಲ ಮತ್ತು ಎಡ ತುದಿಗಳು 9 ಮೀಟರ್ ಎತ್ತರವಿದ್ರೆ, ಮಧ್ಯಭಾಗ 20 ಮೀಟರ್ ಎತ್ತರವಿದೆ. ಟರ್ಮಿನಲ್ ಅನ್ನು 74 ಪಿಲ್ಲರ್ಗಳಿಂದ ನಿಲ್ಲಿಸಲಾಗಿದೆ. ಇದರ ಮೇಲ್ಛಾವಣಿಯನ್ನು ಎಸಿಪಿ ಎಂ.ಎಸ್ ನಿಂದ ಮುಚ್ಚಲಾಗಿದೆ. ಟರ್ಮಿನಲ್ನಲ್ಲಿ 6 ಚೆಕ್ ಇನ್ ಕೌಂಟರ್ಗಳಿವೆ. ಇದರಲ್ಲಿ ವಿಐಪಿ ಗಳಿಗೆ ಪ್ರತ್ಯೇಕ ಎರಡು ಚೆಕ್ ಇನ್ ಕೌಂಟರ್, ಉಳಿದ ನಾಲ್ಕು ಸಾಮಾನ್ಯ ಚೆಕ್ ಇನ್ ಕೌಂಟರ್ಗಳಾಗಿವೆ. ಒಂದು ಕ್ಯಾಂಟೀನ್ ಇದೆ. ಎರಡು ಸ್ನ್ಯಾಕ್ಸ್ ಬಾರ್ಗಳಿವೆ. ಚೈಲ್ಡ್ ಕೇರ್ , ಡಾಕ್ಟರ್ಸ್, ಏರ್ ಲೈನ್ ಆಫೀಸ್, ಲಾಸ್ಟ್ ಅಂಡ್ ಫೈನ್, ಸ್ಟಾಫ್ ಎಲ್ಲಾ ಸೇರಿ ಟರ್ಮಿನಲ್ನಲ್ಲಿ 35 ರೂಮ್ಗಳಿವೆ.
ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಹೈದರಾಬಾದ್ ಮೂಲದ ಕೆಎಂವಿ (ಕೆ.ಎಂ. ವರದಪ್ರಸಾದ ರಾವ್) ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ನಿರ್ಮಾಣ ಮಾಡಿದೆ. ಈ ಕಂಪನಿಯವರ ಪ್ರಕಾರ, ಇಷ್ಟು ದೊಡ್ಡ ಟರ್ಮಿನಲ್ ಸೇರಿದಂತೆ ಮೂಲಭೂತ ಸೌಕರ್ಯವುಳ್ಳ ಟರ್ಮಿನಲ್ ಇರುವುದು ಬೆಂಗಳೂರನ್ನು ಬಿಟ್ಟರೆ ಶಿವಮೊಗ್ಗದಲ್ಲಿಯೇ ಎನ್ನುತ್ತಾರೆ. ವಿಐಪಿಗಳಿಗೆ ಪ್ರತ್ಯೇಕ ಶೌಚಾಲಯವಿದೆ. ಹೊರಗಡೆ ಟ್ಯಾಕ್ಸಿ ಚಾಲಕರಿಗೆ ಒಂದು ಶೌಚಾಲಯವಿದ್ದು, ಒಟ್ಟು ಐದು ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ರಾಜ್ಯದ ಎರಡನೇ ಅತಿ ದೊಡ್ಡ ರನ್ ವೇ: ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ 3,050 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲ ಹೊಂದಿದೆ. ಈ ರನ್ ವೇ ನಲ್ಲಿ ದೇಶದ ಅತಿ ದೊಡ್ಡ ವಿಮಾನವಾದ ಏರ್ ಬಸ್ 320ಅನ್ನು ಇಳಿಸಬಹುದಾಗಿದೆ.
ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡದಾದ ಎಟಿಎಸ್( ಏರ್ ಟ್ರಾಫಿಕ್ ಕಂಟ್ರೋಲರ್) ಕಟ್ಟಡವನ್ನು ಹೊಂದಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ನಿಲ್ದಾಣದ ಸುತ್ತ ನಿಗದಿತ ಸ್ಥಳಗಳಲ್ಲಿ ವಾಚ್ ಟವರ್ ಸೇರಿದಂತೆ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಅಲ್ಲಲ್ಲಿ ತುರ್ತು ನಿರ್ಗಮನಕ್ಕೆ ಸಣ್ಣ ಸಣ್ಣ ಗೇಟ್ ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ ಮುಂಭಾಗ ಸುಂದರವಾದ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ಪ್ರವೇಶದಲ್ಲೂ ಸಹ ಟರ್ಮಿನಲ್ ಮಾದರಿ ಕಮಾನು ನಿರ್ಮಾಣ ಮಾಡಲಾಗುತ್ತಿದೆ.
ವಿಮಾನ ನಿಲ್ದಾಣದ ಪ್ರವೇಶದಲ್ಲಿ ಪ್ರಯಾಣಿಕರಿಗೆ ಎರಡು ದೊಡ್ಡ ರಸ್ತೆಗಳು ಸ್ವಾಗತ ಕೋರುತ್ತವೆ. ಈ ರಸ್ತೆಯು ನೇರವಾಗಿ ಟರ್ಮಿನಲ್ಗೆ ಸಂಪರ್ಕ ಮಾಡುತ್ತವೆ. ಟರ್ಮಿನಲ್‌ನಿಂದ ವಾಪಸ್ ಆಗಲು ಪ್ರತ್ಯೇಕ ರಸ್ತೆ ಇದೆ. ಅಲ್ಲದೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ವಿಮಾನ ನಿಲ್ದಾಣವು 775 ಎಕರೆ ಪ್ರದೇಶದಲ್ಲಿ ಇರುವುದರಿಂದ ಅತ್ಯಂತ ವಿಶಾಲವಾಗಿ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಸುತ್ತಲು ಹಸಿರೀಕರಣ ಮಾಡಲಾಗುತ್ತದೆ. ಹಗಲು, ರಾತ್ರಿ ಸಹ ವಿಮಾನ ಆಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿರುವ ಏಕೈಕ ವಿಮಾನ ನಿಲ್ದಾಣ: ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯ ಸರ್ಕಾರದ ಸುರ್ಪದಿಯಲ್ಲಿ ಇರುವ ಏಕೈಕ ವಿಮಾನ ನಿಲ್ದಾಣವಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ವಿಮಾನ ನಿಲ್ದಾಣಗಳು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನಿರ್ವಹಣೆಯಲ್ಲಿವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ಮಟ್ಟಿಗೆ ಹೊರೆಯಾಗಬಹುದು ಎನ್ನಬಹುದು. ಇದಕ್ಕಾಗಿ ಪ್ರತ್ಯೇಕ ನಿರ್ದೇಶಕರನ್ನು ಹಾಗೂ ಟೆಕ್ನಿಕಲ್ ಅಡ್ವೆಸರ್ ಅನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ರಕ್ಷಣೆ: ವಿಮಾನ ನಿಲ್ದಾಣ ರಾಜ್ಯ ಸರ್ಕಾರದ ಸುಪರ್ದಿಯಲ್ಲಿ ಇರುವುದರಿಂದ ಇದರ ಭದ್ರತೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF)ಗೆ ವಹಿಸಲಾಗಿದೆ. ಇವರು ಇಲ್ಲಿನ ಸಂಪೂರ್ಣ ಭದ್ರತೆಯ ಹೊಣೆಯನ್ನು ಹೊತ್ತಿದ್ದಾರೆ. ವಿಮಾನ ನಿಲ್ದಾಣದ ಒಳಗಡೆ ಪ್ರಯಾಣಿಕರ ಲಗೇಜ್ ಚೆಕ್ ಮಾಡುವ ಯಂತ್ರ ಸೇರಿದಂತೆ ಎಲ್ಲವನ್ನು ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ ಒಳಗಡೆ ಜಿಲ್ಲೆಯ ಹಾಗೂ ಕರ್ನಾಟಕ ರಾಜ್ಯದ ವಿವಿಧ ಪ್ರಸಿದ್ಧ ಪ್ರವಾಸಿ ತಾಣಗಳು, ಕವಿಗಳು, ಅವರ ಕವಿತೆಯ ಕೆಲ ಸಾಲುಗಳನ್ನು ಹಾಕಲಾಗಿದೆ. ಇದು ಪ್ರಯಾಣಿಕರಿಗೆ ತುಸು ಸಂತೋಷ ತರುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯು ಸೇನೆಯ 737 ಹಾಗೂ ಐಎನ್ 76 ವಿಮಾನಗಳು ಬಂದಿಳಿದಿವೆ. ಈ ವಿಮಾನಗಳ ಪೈಲೆಟ್ಗಳು ಸಹ ಇಲ್ಲಿನ ರನ್ ವೇ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸದ್ಯಕ್ಕೆ ಹಗಲು ವೇಳೆ ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ಸಹ ವಿಮಾನ ಹಾರಾಟದ ವ್ಯವಸ್ಥೆ ಮಾಡಲಾಗುವುದು. ವಿಮಾನ ನಿಲ್ದಾಣ ಉದ್ಘಾಟನೆಯಾಗಿ 3-4 ತಿಂಗಳಲ್ಲೇ ರಾತ್ರಿ ವಿಮಾನ ಹಾರಾಟ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: Watch.. ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಂದಿಳಿದ ಲೋಹದ ಹಕ್ಕಿ
ಇನ್ನು, ವಿಮಾನ ಹಾರಾಟದ ಕುರಿತು ಲೈಸೆನ್ಸ್ ನೀಡುವ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ನವರು ಒಂದು ವಾರಗಳ ಕಾಲ ವಿಮಾನ ನಿಲ್ದಾಣದಲ್ಲಿದ್ದು, ಪ್ರತಿಯೊಂದು ವಿಭಾಗವನ್ನು ಸೂಕ್ಷ್ಮವಾಗಿ ಗಮನಿಸಿ ವರದಿಯನ್ನು ನೀಡಿದ್ದಾರೆ. ಇದರಿಂದ ವಿಮಾನ ಹಾರಾಟಕ್ಕೆ ಬೇಗ ಅನುಮತಿ ಸಿಗುವ ಸಾಧ್ಯತೆಗಳಿವೆ. ಇದಕ್ಕಾಗಿ ಫೈರ್ ಅಂಡ್ ಸೇಫ್ಟಿ, ಸೆಕ್ಯುರಿಟಿ, ಮ್ಯಾನ್ಪವರ್ ಅನ್ನು ಸಹ ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಗೋವನ್ನು ಸಹ ಪ್ರಾರಂಭ ಮಾಡಲಾಗುವುದು. ಅಲ್ಲದೆ, ವಿಮಾನ ಹಾರಾಟ ಚಾಲಕರ ತರಬೇತಿ ಸಹ ಪ್ರಾರಂಭ ಮಾಡಲಾಗುವುದು ಎನ್ನಲಾಗಿದೆ.
ಈ ವಿಮಾನ ನಿಲ್ದಾಣ ಶಿವಮೊಗ್ಗ ಜಿಲ್ಲೆಗಷ್ಟೇ ಅಲ್ಲದೆ, ಸುತ್ತಮುತ್ತಲಿನ ಜಿಲ್ಲೆಯ ಜನತೆಗೂ ಅತ್ಯಂತ ಅನುಕೂಲವಾಗಲಿದೆ. ಮೊದಲು ಬೆಂಗಳೂರು- ಶಿವಮೊಗ್ಗ, ಶಿವಮೊಗ್ಗ- ಬೆಂಗಳೂರು ಹಾರಾಟ ನಡೆಸಲಿದೆ. ನಂತರ ಮುಂಬೈ- ಬೆಂಗಳೂರು- ಶಿವಮೊಗ್ಗ, ಹೈದರಾಬಾದ್- ಬೆಂಗಳೂರು- ಶಿವಮೊಗ್ಗ ಹಾರಾಟ ನಡೆಸಬಹುದಾಗಿದೆ ಎನ್ನುತ್ತಾರೆ ಶಿವಮೊಗ್ಗ ವಿಮಾನ ನಿಲ್ದಾಣದ KSISF ನ ಟೆಕ್ನಿಕಲ್ ಅಡ್ವೆಸರ್, ಚೀಫ್ ಆಪರೇಟರ್ ಬ್ರಿಗೇಡಿಯರ್ ಪೂರ್ವಿಮಠ್.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್ಪಿಜಿ ತಂಡ ಆಗಮನ- ವಿಡಿಯೋ
ಮಾಜಿ ಸಿಎಂ ಯಡಿಯೂರಪ್ಪನವರ ಕನಸಿನ ಕೂಸು: ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂಬುದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಹುದಿನ ಕನಸಾಗಿತ್ತು. ಅವರು ಮೊದಲು ಸಿಎಂ ಆಗಿದ್ದಾಗ ಏರ್ಪೋರ್ಟ್ ನಿರ್ಮಾಣ ಮಾಡಬೇಕೆಂದು ತೀರ್ಮಾನ ಮಾಡಿ, ಜಾಗ ಗುರುತಿಸಿ, ಇಲ್ಲಿ ಉಳುಮೆ ಮಾಡುವ ಬಗರ್ ಹುಕುಂ ಹಾಗೂ ಖಾತೆದಾರ ರೈತರ ಮನವೊಲಿಸಿ, ಖಾತೆದಾರರಿಗೆ ಹಾಗೂ ಬಗರ್ ಹುಕುಂ ರೈತರಿಗೆ ಪ್ರತ್ಯೇಕ ಪರಿಹಾರ ಧನ ನೀಡಿ ಕಾಮಗಾರಿ ಪ್ರಾರಂಭಿಸಿದರು.
ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕಳೆಗೆ ಇಳಿದ ಮೇಲೆ ಅದು ನೆನೆಗುದಿಗೆ ಬಿದ್ದಿತು. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಪೂರ್ಣಗೊಂಡ ಕಾಮಗಾರಿಯನ್ನು ಪ್ರಾರಂಭಿಸಿದರು. ಇದು ರಾಜ್ಯದ ವಿಶೇಷವಾದ ವಿಮಾನ ನಿಲ್ದಾಣವಾಗಬೇಕೆಂದು ಇನ್ನಷ್ಟು ಭೂಮಿಯನ್ನು ಪಡೆದು ವಿಸ್ತರಿಸಿದರು. ಇದರ ಫಲವಾಗಿ ಇಂದು ಶಿವಮೊಗ್ಗದ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಇದಕ್ಕೆ ತಮ್ಮ ಹೆಸರನ್ನು ಇಡಬೇಕೆಂಬ ಪ್ರಸ್ತಾಪ ಮಾಡಿದಾಗ ನಯವಾಗಿ ತಿರಸ್ಕಾರ ಮಾಡಿದ ಮಾಜಿ ಸಿಎಂ, ರಾಷ್ಟ್ರಕವಿ ಕುವೆಂಪು ರವರ ಹೆಸರನ್ನು ತಾವೇ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಅವರು ಸೋಮವಾರ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಹೆಸರನ್ನು ಘೋಷಿಸಲಿದ್ದಾರೆ. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಹೆಚ್ಚಿನ ಪರಿಹಾರ ಹಾಗೂ ಸೈಟ್ ನೀಡುವ ಕುರಿತು ಕೆಲ ಗೊಂದಲಗಳಿವೆ. ಇದಕ್ಕೆ ಸೋಮವಾರ ತೆರೆ ಬೀಳುವ ಸಾಧ್ಯತೆ ಇದೆ. ಫೆ.27 ಯಡಿಯೂರಪ್ಪ ಅವರ ಜನ್ಮದಿನವಾಗಿದ್ದು, ಅದೇ ದಿನ ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿರುವುದು ವಿಶೇಷ.