ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪನವರು ರಾಜೀನಾಮೆ ಸಲ್ಲಿಸುತ್ತಿದ್ದಂತೆ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಜನತೆ ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಜನ ನಾಯಕನ ಪರವಾಗಿದ್ದೇವೆ ಎಂದು ತೋರಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಶಿಕಾರಿಪುರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಯಡಿಯೂರಪ್ಪನವರ ಪರ ಘೋಷಣೆ ಹಾಕಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಯಡಿಯೂರಪ್ಪ ಅಭಿಮಾನಿಗಳು ಸಚಿವ ಯೋಗೇಶ್ವರ್ ಹಾಗೂ ಶಾಸಕ ಯತ್ನಳ್ ಫೋಟೋಗೆ ಧಿಕ್ಕಾರ ಕೂಗಿದರು.
ಬಿಜೆಪಿ ಅಧಿಕಾರಕ್ಕೆ ಬರುವಾಗ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯವರು ಈಗ ಬಿಎಸ್ವೈಗೆ ವಯಸ್ಸಾಗಿದೆ ಎಂಬ ಕಾರಣ ನೀಡಿ ಅವರನ್ನು ಅಧಿಕಾರದಿಂದ ಕೆಳಗಿಸುತ್ತಿರುವುದು ಸರಿಯಲ್ಲ. ಸಿಪಿ ಯೋಗೇಶ್ವರ್ ಶಾಸಕರಾಗಿ ಗೆಲ್ಲಲು ಆಗದಿದ್ದಾಗ ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಿದ ಬಿಎಸ್ವೈ ವಿರುದ್ಧ ಪಿತೂರಿ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ರಾಜೀನಾಮೆಗೆ ಶಿವಮೊಗ್ಗ ಜನತೆ ಬೇಸರ:
ಇನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಸಿಎಂ ತವರು ಕ್ಷೇತ್ರದ ಜನತೆ ಬೆಸರ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನರಂತ ಇನ್ನೊಬ್ಬ ನಾಯಕ ಬರಲು ಸಾಧ್ಯವಿಲ್ಲ.ಅವರ ಆಡಳಿತಾವಧಿಯಲ್ಲಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಕೊರೊನಾ ಸಂದರ್ಭದಲ್ಲಿ ಸಹ ಸಾಕಷ್ಟು ಕೆಲಸ ಮಾಡಿದ್ದಾರೆ. ಇಂತವರನ್ನು ಪೂರ್ಣಾವಧಿ ಅಧಿಕಾರ ನಡೆಸಲು ಬೀಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.