ಶಿವಮೊಗ್ಗ: ಜಿಲ್ಲೆ ಸೇರಿದಂತೆ ರಾಜ್ಯದ ಎರಡು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ರೈತರ ಬದುಕಲ್ಲಿ ಬೆಳಕಾಗಿರುವ ಭದ್ರಾ ಜಲಾಶಯದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಆರು ತಿಂಗಳಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.
25 ವರ್ಷಗಳಿಂದ ಭದ್ರಾ ಜಲಾಶಯದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, 2015ರ ನಂತರ ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯಾಪ್ತಿಯ ಭದ್ರಾ ಜಲಾಶಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ಸರಿಯಾಗಿ ವೇತನ ನೀಡದೆ ಹಾಗೂ ಕಾರ್ಮಿಕರಿಗೆ ಪಿಎಫ್ ಹಣವನ್ನು ಪಾವತಿಸದೇ ಗುತ್ತಿಗೆದಾರ ಡಿ.ಸಿ.ರಾಜಣ್ಣ ಎಂಬುವರು ಮೋಸ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ನಮಗೆ ನ್ಯಾಯ ಕೊಡಿಸಿ ತಿಂಗಳಿಗೆ ಸರಿಯಾಗಿ ವೇತನ ಸಿಗುವಂತೆ ಮಾಡಿ. ಅಲ್ಲದೇ, ಟೆಂಡರ್ನಲ್ಲಿ 17,870 ಸಂಬಳದ ಲೆಕ್ಕಾ ತೋರಿಸಿ ನಮಗೆ ಕೇವಲ 7,500 ಮಾತ್ರ ನೀಡುತ್ತಿದ್ದಾರೆ. ಹಾಗೆಯೇ ಆ ಸಂಬಳವನ್ನು ಆರು ತಿಂಗಳಿಂದ ನೀಡಿಲ್ಲ ಎಂದು ಆರೋಪಿಸಿದರು.
ಇಎಸ್ಐ ಹಣವನ್ನೂ ಪಾವತಿಸುತ್ತಿಲ್ಲ. ಹೀಗಾಗಿ, ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಭದ್ರಾ ಜಲಾಶಯದಲ್ಲಿ ಕೆಲಸ ನಿರ್ವಹಿಸುತ್ತಿರುವ 83 ಹೊರ ಗುತ್ತಿಗೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.