ಶಿವಮೊಗ್ಗ: ಬಿಜೆಪಿಯವರು ಕೇವಲ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದಾರೆ ಹೊರತು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನುಡಿದಂತೆ ನಡೆದ ಸರ್ಕಾರ ಏನಾದರೂ ಇದ್ದರೆ ಅದು ಕೇವಲ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮಾತ್ರ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ಆರ್ ಪಾಟೀಲ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಚೈತನ್ಯ ಸಮಾವೇಶದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ಆರ್ ಪಾಟೀಲ್ ಪಾಲ್ಗೊಂಡಿದ್ದು, 2014ರ ಚುನಾವಣೆ ಪೂರ್ವದಲ್ಲಿ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ, ಕಪ್ಪು ಹಣ ತರುತ್ತೇನೆ ಎಂದು ಆಶ್ವಾಸನೆ ನೀಡಿದ್ದರು, ಆದರೆ ಇಂದು ಇರುವ ಉದ್ಯೋಗಗಳನ್ನೇ ಜನರು ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ಹೀಗಿರುವಾಗ ಇವರ ಆಶ್ವಾಸನೆಗಳು ಎಲ್ಲಿ ಹೋಗಿವೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದು 165 ಭರವಸೆಗಳನ್ನು ಈಡೇರಿಸುವ ಮೂಲಕ ರಾಜ್ಯದ ಅಭಿವೃದ್ದಿಗೆ ಶ್ರಮಿಸಿದೆ. ಅಷ್ಟೇ ಅಲ್ಲದೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದೇವೆ,
ಭಾಗ್ಯಗಳ ನೇತಾರ ಸಿದ್ದರಾಮಯ್ಯ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲೆಂದು ಅನೇಕ ಭಾಗ್ಯ ಯೋಜನೆಗಳನ್ನ ಜಾರಿಗೆ ತಂದರು ಇದು ನಮ್ಮ ಸಾಧನೆ ಎಂದರು.
ಆಡಿಯೋ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರದಲ್ಲಿ ಅಮಿತ್ ಶಾ ಅವರ ಪಾತ್ರ ಪ್ರಮುಖವಾಗಿದೆ. ದೇಶದ ಗೃಹ ಸಚಿವರು ಇಂತಹ ಹೀನ ಕೃತ್ಯಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.