ಶಿವಮೊಗ್ಗ: ತೀರ್ಥಹಳ್ಳಿಯ ಕಟ್ಟೆಹಕ್ಲು ಗ್ರಾಮದ ಗಣಪತಿಕಟ್ಟೆ ಬಳಿ ಅಂಚೆ ಕಚೇರಿಯಿಂದ ಹಣ ಬಿಡಿಸಿಕೊಂಡು ಬರುತ್ತಿದ್ದ ವೃದ್ದೆಯನ್ನು ಅಡ್ಡಗಟ್ಟಿದ ಖದೀಮರು ಆಕೆಯ ಕತ್ತು ಹಿಸುಕಿ ಹಣ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ದುಷ್ಕರ್ಮಿಗಳ ದಾಳಿಯಿಂದ ತೀವ್ರ ಗಾಯಗೊಂಡಿದ್ದ ವೃದ್ಧೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ದುರದೃಷ್ಟವಶಾತ್ ಮೃತಪಟ್ಟಿದ್ದಾರೆ.
ನಿನ್ನೆ ಗ್ರಾಮದ ಗಣಪತಿಕಟ್ಟೆ ಬಳಿ ಭವಾನಿಯಮ್ಮ ಎಂಬುವರು ಅಂಚೆ ಕಚೇರಿಯಿಂದ ತಮ್ಮ ಪಿಂಚಣಿ ಹಣ ತರುವಾಗ ಬೈಕಿನಲ್ಲಿ ಬಂದ ಇಬ್ಬರು ಹಣ ಕಿತ್ತುಕೊಂಡು ಹೋಗಲು ಯತ್ನಿಸಿದ್ದಾರೆ. ಇದಕ್ಕೆ ವೃದ್ದೆ ವಿರೋಧ ವ್ಯಕ್ತಪಡಿಸಿ ಕೂಗಿಕೊಂಡಿದ್ದಾರೆ. ಇದರಿಂದ ಬೆದರಿದ ಕಳ್ಳರು ವೃದ್ದೆಯ ಕತ್ತು ಹಿಸುಕಿದ್ದಾರೆ.
ತಕ್ಷಣ ಸ್ಥಳೀಯರು ಓಡಿ ಬಂದು ಕಳ್ಳರನ್ನು ಬೈಕಿನಲ್ಲಿ ಹಿಂಬಾಲಿಕೊಂಡು ಹೋಗಿ ಶಿವಮೊಗ್ಗದ ಗೋಪಾಳದ ನಿತಿನ್ (25) ಎಂಬುವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಇನ್ನೋರ್ವ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ವೃದ್ದೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಭವಾನಿಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಬಂಧಿತ ಕಳ್ಳ ಹಿಂದೆ ಉಡುಪಿಯ ದೇವಾಲಯದಲ್ಲಿ ಕಳ್ಳತನ ನಡೆಸಿದ್ದ ಎಂದು ತಿಳಿದು ಬಂದಿದೆ.
ಓದಿ: ಕೊರೊನಾ ಕಷ್ಟಕಾಲದಲ್ಲೂ ಜನಸಾಮಾನ್ಯರ ರಕ್ತ ಹೀರಲು ಮುಂದಾದ ಖಾಸಗಿ ಆಸ್ಪತ್ರೆಗಳು