ಶಿವಮೊಗ್ಗ: ಮಳೆಗಾಲ ಮುಗಿಯುವವರೆಗೂ ಆಗುಂಬೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 12 ಟನ್ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ರಾಜ್ಯದ ಅತ್ಯಂತ ಕಿರಿಯ ಘಾಟ್ಗಳಲ್ಲಿ ಆಗುಂಬೆ ಘಾಟ್ ಒಂದಾಗಿದ್ದು, ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿಯಾಗಿದೆ. ಈ ಘಾಟಿ ಮಲೆನಾಡು ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಅತೀ ಹೆಚ್ಚು ಮಳೆಯಾಗುವುದರಿಂದ ಘಾಟಿಯ ಇಕ್ಕೆಲದಲ್ಲಿ ಮಣ್ಣು ಕುಸಿತವಾಗುತ್ತದೆ. ಇದರಿಂದ ರಸ್ತೆ ಸಂಚಾರಕ್ಕೆ ತೀವ್ರ ತೊಡಕುಂಟಾಗುವ ಹಿನ್ನೆಲೆ ಮಳೆಗಾಲ ಮುಗಿಯುವವರೆಗೂ ಸಹ ಸಣ್ಣ ವಾಹನ ಸಂಚಾರ ಹೊರತುಪಡಿಸಿ ದೊಡ್ಡ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಆಗುಂಬೆ ಘಾಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ತೀವ್ರ ಮಣ್ಣು ಕುಸಿತವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಂಗಳೂರು ವಿಭಾಗದ ರಾಷ್ಟ್ರೀಯ ಹೆದ್ದಾರಿಯ ಕಾರ್ಯಪಾಲಕ ಇಂಜಿನಿಯರ್, ಶಿವಮೊಗ್ಗ ಆರ್ಟಿಒ ಹಾಗೂ ಶಿವಮೊಗ್ಗ ಎಸ್ಪಿ ಅವರ ಪತ್ರದ ಮೇರೆಗೆ ಇಂದು ಮುಂಜಾನೆಯಿಂದ ಅಕ್ಟೋಬರ್ 15ರ ತನಕ 12 ಟನ್ಗಿಂತಲೂ ಅಧಿಕ ಭಾರದ ವಾಹನಗಳಿಗೆ ಈ ಮಾರ್ಗದಲ್ಲಿ ಸಂಚಾರ ನಿಷೇಧಿಸಿದ್ದಾರೆ.
ಪರ್ಯಾಯ ಮಾರ್ಗಗಳು:
ರಾಷ್ಟ್ರೀಯ ಹೆದ್ದಾರಿ 169ಎ ಮೂಲಕ ಶಿವಮೊಗ್ಗದಿಂದ ಮಂಗಳೂರಿನ ಕಡೆ ಹೋಗ ಬಯಸುವವರು, ಶಿವಮೊಗ್ಗದಿಂದ ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಶೃಂಗೇರಿ ಕಡೆಯಿಂದ ಕೆರೆಕಟ್ಟೆ-ಕಾರ್ಕಳ-ಉಡುಪಿಯಿಂದ ಮಂಗಳೂರು ತಲುಪಬಹುದಾಗಿದೆ. ಈ ಮಾರ್ಗವಲ್ಲದೆ ಶಿವಮೊಗ್ಗದಿಂದ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹುಲಿಕಲ್-ಹೊಸಂಗಡಿ-ಸಿದ್ದಾಪುರ ಮಾರ್ಗವಾಗಿ ಉಡುಪಿಗೆ ಹೋಗಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.