ಶಿವಮೊಗ್ಗ: ಶರಾವತಿ ಹಿನ್ನೀರು ಆಚೆಗಿರುವ ತುಮರಿಯಲ್ಲಿ ಸಂಜೆ ಆರು ಗಂಟೆಯಾಯಿತೆಂದರೆ ಸಾಕು ಹೊರಜಗತ್ತಿನ ಸಂಪರ್ಕವನ್ನೇ ಕಡಿದುಕೊಳ್ಳುತ್ತದೆ. ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್ ಸಂಜೆ ಆರು ಗಂಟೆಗೆ ಸ್ಥಗಿತಗೊಳ್ಳುತ್ತದೆ. ಆಗ ಹಿನ್ನೀರು ಭಾಗದ ಜನರಿಗೆ ಆರೋಗ್ಯ ಹದಗೆಟ್ಟರೆ ಅವರ ಸ್ಥಿತಿ ದೇವರಿಗೇ ಪ್ರೀತಿ.
ತುಮರಿಯಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರವಿದ್ದರೂ ಅಲ್ಲಿ ಆ್ಯಂಬುಲೆನ್ಸ್ ಇಲ್ಲ. ಹೆಚ್ಚಿನ ಚಿಕಿತ್ಸೆ ಬೇಕು ಎಂದರೆ ಸಾಗರಕ್ಕೆ ಬರಬೇಕು. ಲಾಂಚ್ ಸಂಜೆ ಆರು ಗಂಟೆಗೆ ಸ್ಥಗಿತಗೊಂಡ ಬಳಿಕ ಸಾಗರ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಎಂದರೆ 120 ಕಿಲೋಮೀಟರ್ ಸುತ್ತಿಕೊಂಡು ಬರಬೇಕು. ಈ ಸಮಸ್ಯೆಯಿಂದಾಗಿಯೇ ನಿನ್ನೆ ನವಜಾತ ಶಿಶುವೊಂದು ಪ್ರಾಣ ಕಳೆದುಕೊಂಡಿದೆ.
ಏನಿದು ಘಟನೆ?
ಸಾಗರ ತಾಲೂಕಿನ ತುಮರಿ ಭಾಗದ ಚೆದರವಳ್ಳಿ ಗ್ರಾಮದ ಚೈತ್ರಾ ಎಂಬುವರಿಗೆ ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಚೈತ್ರಾ ಅವರನ್ನು ಕುಟುಂಬದವರು ತುಮರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಚೈತ್ರಾಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಅಲ್ಲಿನ ವೈದ್ಯರು ಸಾಗರಕ್ಕೆ ಕರೆದುಕೊಂಡು ಹೋಗಲು ಹೇಳಿದ್ದಾರೆ.
ಆದರೆ, ಚೈತ್ರಾರನ್ನು ಸಾಗರಕ್ಕೆ ಕರೆದುಕೊಂಡು ಹೋಗಲು ತುಮರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇರಲಿಲ್ಲ. ತುಮರಿ ಆಸ್ಪತ್ರೆಯ ಆ್ಯಂಬುಲೆನ್ಸ್ ನಾಪತ್ತೆಯಾಗಿ 25 ದಿನಗಳೇ ಕಳೆದಿದೆ. ಆ್ಯಂಬುಲೆನ್ಸ್ ಎಲ್ಲಿಗೆ ಹೋಗಿದೆ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೇ ಇದುವರೆಗೆ ಯಾವುದೇ ಮಾಹಿತಿ ಇಲ್ಲ.
ಇದನ್ನೂ ಓದಿ: ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿಗೆ ತೆರೆ ಎಳೆದ ಸಭಾಪತಿ ಹೊರಟ್ಟಿ..!
ಚೈತ್ರಾರನ್ನು ಕಾರಿನಲ್ಲೇ ಕೂರಿಸಿಕೊಂಡ ಕುಟುಂಬದವರು 120 ಕಿಲೋಮೀಟರ್ ಸುತ್ತಿಕೊಂಡು ಸಾಗರಕ್ಕೆ ಹೋಗಲು ನಿರ್ಧರಿಸಿದ್ದಾರೆ. ಆದರೆ , ಅಷ್ಟರಲ್ಲಾಗಲೇ ಚೈತ್ರಾಗೆ ಹೆರಿಗೆ ನೋವು ಹೆಚ್ಚಾದ ಕಾರಣ ತುಮರಿ ಆಸ್ಪತ್ರೆಯಲ್ಲೇ ಚೈತ್ರಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದೇ ವೇಳೆಗೆ ಚೈತ್ರಾ ಹಾಗೂ ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಇಬ್ಬರನ್ನೂ ಸಾಗರಕ್ಕೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ.
ಕೂಡಲೇ ಲಾಂಚ್ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಮಾನವೀಯ ದೃಷ್ಟಿಯಿಂದ ಲಾಂಚ್ ಸಿಬ್ಬಂದಿ ರಾತ್ರಿ ಹತ್ತುಗಂಟೆ ವೇಳೆಗೆ ಲಾಂಚ್ ಸೇವೆ ಒದಗಿಸಿದ್ದಾರೆ. ಹೀಗಾಗಿ ಖಾಸಗಿ ವಾಹನದಲ್ಲೇ ತಾಯಿ ಮಗುವನ್ನು ಸಾಗರ ಆಸ್ಪತ್ರೆಗೆ ಕರೆತರುವ ಮುನ್ನ ಮರ್ಗ ಮಧ್ಯೆಯೇ ನವಜಾತ ಶಿಶು ಮೃತಪಟ್ಟಿದೆ. ತಾಯಿಯನ್ನು ಸಾಗರ ಆಸ್ಪತ್ರೆಗೆ ಕರೆತಂದಿದ್ದರಿಂದಾಗಿ ತಾಯಿ ಪ್ರಾಣ ಉಳಿದಿದೆ.
ಪ್ರವಾಸಕ್ಕೆಂದು ಯಾವಾಗಲಾರದರೂ ಒಮ್ಮೆ ಹೋಗಿಬರಲು ಶರಾವತಿ ಹಿನ್ನೀರಿನ ಆಚೆಗೆ ಇರುವ ತುಮರಿ ಭಾಗ ಸ್ವರ್ಗ. ಆದರೆ, ಆ ಭಾಗದಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಜೀವನ ನರಕ ಸದೃಶ. ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಆ್ಯಂಬುಲೆನ್ಸ್ ಸೇವೆ ಇಲ್ಲದೇ ನವಜಾತ ಶಿಶು ಮೃತಪಟ್ಟಿದೆ.