ಶಿವಮೊಗ್ಗ: ಟಿಪ್ಪುವನ್ನು ಪೂಜೆ ಮಾಡುವವರು ಮನೆಯಲ್ಲಿರಬೇಕು. ಶಿವಪ್ಪನಾಯಕನನ್ನು ಪೂಜಿಸುವವರು ವಿಧಾನಸೌಧದಲ್ಲಿರಬೇಕು. ಆದ್ದರಿಂದ ನೀವು ಈ ಚುನಾವಣೆಯಲ್ಲಿ ಕಮಲವನ್ನು ಅರಳಿಸಲು ಸಂಕಲ್ಪ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.
ಶಿವಮೊಗ್ಗ ಗ್ರಾಮಾಂತರ ಭಾಗದ ಪೇಜ್ ಪ್ರಮುಖರ ಸಮಾವೇಶವನ್ನು ಹೊಳಲೂರಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯು ರಾಜ್ಯ ರಾಜಕೀಯಕ್ಕೆ ಮತ್ತು ಸಂಘಟನೆಗೆ ಪ್ರೇರಣೆ. ನಮಗೆ ಬಂಡೆ ಒಡೆಯುವ ವಿಶ್ವಾಸವಿದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಈ ಬಾರಿ ಸಿದ್ಧರಾಮಯ್ಯ ಮನೆಗೆ ಹೋಗುವುದು ನಿಶ್ಚಿತ. ಭಾರತ್ ಜೋಡೋ ಯಾತ್ರೆ ನಡೆಸಿದ ರಾಹುಲ್ ಗಾಂಧಿ ರಾಜಕೀಯ ನಿವೃತ್ತಿ ಪಡೆದು ಇಟಲಿಗೆ ಹೋಗ್ತಾರೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯಗೆ ಸವಾಲು ಹಾಕಿದ ಕಟೀಲ್: ಸಿದ್ದರಾಮಯ್ಯ ಮತ್ತೆ ಬಾದಾಮಿಯಲ್ಲಿ ಚುನಾವಣೆಗೆ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ನಮ್ಮಲ್ಲಿ ಪೇಜ್ ಪ್ರಮುಖರು ಎಂದರೆ ಸೇನಾನಿಗಳ ತಂಡ. ಬಿಜೆಪಿ ಅಧಿಕಾರಕ್ಕೆ ತರಲು ಸೇನಾನಿಗಳೇ ಕಾರಣ. ಈ ಬಾರಿ ಸಿದ್ದರಾಮಣ್ಣನನ್ನು ಅಧಿಕಾರಕ್ಕೆ ತರುವುದು ಬೇಡ ಎಂದು ಜನ ತೀರ್ಮಾನಿಸಿದ್ದಾರೆ. ಇನ್ನು ಸದಾ ನಿದ್ದೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಂದು ಕಿಚಾಯಿಸಿದರು.
ಕುಮಾರಸ್ವಾಮಿ, ಸಿದ್ದರಾಮಯ್ಯ ನೇತೃತ್ವದ ಪಕ್ಷ ಇಂದು ಯಾರಿಗೂ ಬೇಕಿಲ್ಲ. ಹಲವಾರು ಯೋಜನೆಗಳನ್ನು ನೀಡಿದ ಯಡಿಯೂರಪ್ಪನವರ ಆಡಳಿತ ಬೇಕೆಂದು ಜನರು ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕಟೀಲ್ ಆಹ್ವಾನಿಸಿದರು.
ಇದನ್ನೂ ಓದಿ: ಸಾಹುಕಾರ್ನಾದರು ಇಟ್ಟುಕೊಳ್ಳಲಿ, ಸಾವರ್ಕರ್ನಾದರೂ ಇಟ್ಟುಕೊಳ್ಳಲಿ: ಕಟೀಲ್ ವಿರುದ್ಧ ಡಿಕೆಶಿ ವಾಗ್ದಾಳಿ
ಪಿಎಫ್ಐ ಬ್ಯಾನ್ ಮಾಡಿ ನಾವು 400 ಜನರನ್ನ ಜೈಲಿಗೆ ಹಾಕಿದ್ದೇವೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಯಿತು. ಡಿ.ಕೆ ಶಿವಕುಮಾರ್ಗೆ ಎರಡು ಬಾಂಬ್ ಇವೆ. ಅವುಗಳೆಂದರೆ, ಒಂದು ಬೆಳಗಾವಿ ಮತ್ತೊಂದು ತೀರ್ಥಹಳ್ಳಿ. ಬೆಳಗಾವಿ ಬಾಂಬ್ ಹೊಡೆದರೆ ನಿಮ್ಮ ಕುಟುಂಬ ಒಡೆಯುತ್ತೆ. ತೀರ್ಥಹಳ್ಳಿ ಬಾಂಬ್ ಹೊಡೆದರೆ ದೇಶ ಹಾಳಾಗುತ್ತೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ: ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನೀವೆಲ್ಲಾ ಸೇರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೀರಿ ಎಂಬ ನಂಬಿಕೆ ನನಗೆ ಇದೆ. ಇಡೀ ರಾಜ್ಯದಲ್ಲಿ ಒಂದು ಅಭೂತಪೂರ್ವವಾದ ವಾತಾವರಣವಿದೆ. ಬಂಡೆಯನ್ನು ಒಡೆಯುತ್ತೇವೆ. ಹುಲಿಯನನ್ನು ಕಾಡಿಗೆ ಅಟ್ಟುತ್ತೇವೆ ಎಂಬ ವಿಶ್ವಾಸ ನನಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣವಾಗುತ್ತದೆ. 2023ರಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದರು.
ಇದನ್ನೂ ಓದಿ: ರಾಜಕೀಯ ಗೊತ್ತಿಲ್ಲದ ಕಟೀಲ್ ತಮ್ಮ ಹೆಸರನ್ನು ಪಿಟೀಲೆಂದು ಬದಲಿಸಲಿ: ಹೆಚ್‌ಡಿಕೆ
ಈ ವೇಳೆ ಶಾಸಕ ಅಶೋಕ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಭಾನುಪ್ರಕಾಶ್, ಶಾಸಕರಾದ ಎಸ್.ರುದ್ರೇಗೌಡ, ಡಿಎಸ್.ಅರುಣ್, ಪ್ರಮುಖರಾದ ಮೋನಪ್ಪ ಭಂಡಾರಿ, ಡಾ.ಧನಂಜಯ ಸರ್ಜಿ, ರತ್ನಾಕರ ಶೆಣೈ ಸೇರಿದಂತೆ ಮತ್ತಿತರರಿದ್ದರು.