ಶಿವಮೊಗ್ಗ: ಜಾಗತಿಕವಾಗಿ ಅಗ್ರಪಂಕ್ತಿಯಲ್ಲಿ ಗುರುತಿಸಲ್ಪಡುವ ಮೈಸೂರು ರೇಷ್ಮೆ ಉತ್ಪನ್ನಗಳು ನಾಡಿನ ಹೆಮ್ಮೆ ಹಾಗೂ ಶ್ರೇಷ್ಠ ಪರಂಪರೆಯ ಪ್ರತೀಕವೆನಿಸಿದೆ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ ಮೈಸೂರು ಸಿಲ್ಕ್ ಸೀರೆ ಹಾಗೂ ಸಿಲ್ಕ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ನಕಲು ಮಾಡಲಾಗದಂತಹ ಮೈಸೂರು ಸಿಲ್ಕ್ ಉತ್ಪನ್ನಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವರ್ಷಕ್ಕೆ 2 ಬಾರಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ. ಇಲ್ಲಿನ ಉತ್ಪನ್ನಗಳನ್ನು ಶ್ರೀಸಾಮಾನ್ಯರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಖರೀದಿಸಬಹುದಾಗಿದೆ ಎಂದರು.
ಅಂತೆಯೇ ಸಂಸ್ಥೆಯು ಕಾಲಕಾಲಕ್ಕೆ ನವೀನ ವಿನ್ಯಾಸದ ಉತ್ಪನ್ನಗಳನ್ನು ಜನರ ಬೇಡಿಕೆಗನುಗುಣವಾಗಿ ಉತ್ಪಾದಿಸಿ ಮಾರುಕಟ್ಟೆ ಗೆ ಪರಿಚಯಿಸುತ್ತಿದೆ. ಈ ಮೇಳದಲ್ಲಿ ಹತ್ತು ಸಾವಿರದಿಂದ ಎರಡು ಲಕ್ಷದವರೆಗಿನ ಸೀರೆಗಳು ಲಭ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಸಿಲ್ಕ್ ಸಂಸ್ಥೆಯ ವಿಭಾಗಿಯ ಅಧಿಕಾರಿ ಭಾನುಪ್ರಕಾಶ್ ಉಪಸ್ಥಿತರಿದ್ದರು.