ಶಿವಮೊಗ್ಗ:ಶಿಕಾರಿಪುರ ತಾಲೂಕಿನ ಎಲ್ಲಾ ಹೋಬಳಿಗೂ ನೀರಾವರಿ ಸೌಲಭ್ಯ ಕಲ್ಪಿಸುವ ಸಿಎಂ ಯಡಿಯೂರಪ್ಪನವರ ಕನಸು ಈಡೇರಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಶಿಕಾರಿಪುರ ತಾಲೂಕಿನ ಕಸಬಾ ಹೋಬಳಿಯ ಶೀಲವಂತನಕೊಪ್ಪದಲ್ಲಿ ನಡೆಯುತ್ತಿರುವ ಶೀಲವಂತನಕೊಪ್ಪದ ಕೆರೆ ಏತ ನೀರಾವರಿ ಯೋಜನೆ ಕಾಮಗಾರಿಯ ವೀಕ್ಷಣೆ ನಡೆಸಿ ಅವರು ಮಾತನಾಡಿದರು. ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶೀಲವಂತನಕೊಪ್ಪದ ಕೆರೆಯಿಂದ 500 ಹೆಕ್ಟೇರ್ ಕೃಷಿ ಭೂಮಿಗೆ ನೀರು ಸಿಗಲಿದೆ. ಏತ ನೀರಾವರಿಗೆ ಕುಮದ್ವತಿ ನದಿಯಿಂದ 350 ಹೆಚ್ಪಿಯ 3 ಮೋಟಾರುಗಳಿಂದ ನೀರನ್ನು ಎತ್ತಿ,ಸುಮಾರು 3.6 ಕಿಮಿ ದೂರ ಪೈಪ್ ಗಳ ಮೂಲಕ ಕೆರೆ ತುಂಬಿಸುವ ಯೋಜನೆ ಇದಾಗಿದೆ. ಈ ಏತ ನೀರಾವರಿಗೆ ಹಿಂದಿನ ಮೈತ್ರಿ ಸರ್ಕಾರ ಯೋಜನೆಗೆ ಅನುಮೋದನೆ ನೀಡಿತ್ತು. ಇಂದಿನ ಸರ್ಕಾರ ಅಡೆತಡೆ ನಿವಾರಿಸಿ, ಕಾಮಗಾರಿಗೆ ಚಾಲನೆ ನೀಡಿದೆ. ಪೈಪ್ ಲೈನ್ ಕಾಮಗಾರಿಗೆ 3 ಕೋಟಿ ರೂ. ನಿಗದಿ ಮಾಡಲಾಗಿದೆ. 1 ಕೋಟಿ ರೂ ಪೈಪ್ ಲೈನ್ ಗೆ ನಿಗದಿ ಮಾಡಲಾಗಿದೆ. 1 ಕೋಟಿ ಜಾಕ್ ವೆಲ್, ಮೋಟಾರುಗಳಿಗೆ ನಿಗದಿ ಮಾಡಲಾಗಿದೆ. ಕೆರೆಯಲ್ಲಿ ಹೂಳು ತುಂಬಬಾರದು ಎಂದು 1 ಕೋಟಿ ರೂ ವೆಚ್ಚದಲ್ಲಿ ಹೂಳು ತೆಗೆಯಲಾಗಿದೆ ಎಂದರು.
ಈ ಕೆರೆಯಿಂದ ಕಸಬಾ ಹೋಬಳಿಯ ಅಂಬರಗೊಪ್ಪ, ತುಮರಿ ಹೊಸೂರು, ಸುರಗಿಹಳ್ಳಿ, ಗುಡ್ಡದ ತುಮ್ಮಿನಕಟ್ಟೆ ರೈತರಿಗೆ ಅನುಕೂಲವಾಗಲಿದ್ದು, ಇವರು ವರ್ಷಕ್ಕೆ ಎರಡು ಬೆಳೆ ತೆಗೆಯಬಹುದಾಗಿದೆ. ಅದಷ್ಟು ಬೇಗ ಸಿಎಂ ಯಡಿಯೂರಪ್ಪನವರನ್ನು ಕರೆಯಿಸಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಾಗುವುದು ಎಂದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಟಿ.ಬಿ. ಜಯಚಂದ್ರ ರವರ ಸಹಕಾರದಿಂದ ಗುಡ್ಡದ ತುಮ್ಮಿನಕಟ್ಟೆ ಏತ ನೀರಾವರಿಗೆ ಅವಕಾಶ ಮಾಡಿಕೊಟ್ಟಿದ್ದರು ಎಂದು ನೆನಪು ಮಾಡಿಕೊಂಡರು.
ಈ ವೇಳೆ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ರೇವಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ, ಅಂಬರಗೊಪ್ಪದ ಶೇಖರಪ್ಪ ಹಾಗೂ ಅಧಿಕಾರಿಗಳು ಹಾಜರಿದ್ದರು.