ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮತ್ತು ಪುಲ್ವಾಮ ದಾಳಿಯ ಕುರಿತು ಕಾಂಗ್ರೆಸ್ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿಕೆಯನ್ನು ಸಂಸದ ಬಿ.ವೈ.ರಾಘವೇಂದ್ರ ಖಂಡಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಮಾಗಡಿ ಕ್ಷೇತ್ರದ ಶಾಸಕರಾದ ಹೆಚ್. ಸಿ ಬಾಲಕೃಷ್ಣ ಅವರು ಪ್ರಧಾನ ಮಂತ್ರಿಗಳು ಹಾಗೂ ನಮ್ಮ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವ ಕೆಲಸ ಮಾಡಿದ್ದಾರೆ. ಬಿಜೆಪಿಯನ್ನು ಬ್ರಿಟಿಷರಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಪುಲ್ವಾಮ ದಾಳಿಯನ್ನು ರಾಜಕೀಯ ದುರುದ್ದೇಶ ಎಂದು ಹಗುರವಾಗಿ ಮಾತನಾಡಿದ್ದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ದೇಶಕ್ಕೆ ಸವಾಲುಗಳು ಎದುರಾದಾಗ ರಾಷ್ಟ್ರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದು, ಇದೇ ಕಾಂಗ್ರೆಸ್. ನೆಹರು ಅವರಿಂದ ಹಿಡಿದು ಮನಮೋಹನ ಸಿಂಗ್ ಅವರ ಆಡಳಿತಾವಧಿ ವರೆಗೂ ಅಂತಾರರಾಷ್ಟ್ರೀಯ ಸವಾಲುಗಳ ವಿಚಾರ ಬಂದಾಗ ದೇಶದ ಗೌರವವನ್ನು ಬಿಟ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸುವಂತಹ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ. ನಿಮ್ಮ ಹಾಗೆ ದೇಶವನ್ನು ಬಲಿ ಕೊಟ್ಟು ರಾಜಕೀಯ ಮಾಡುವ ಅವಶ್ಯಕತೆ ಭಾರತೀಯ ಜನತಾ ಪಕ್ಷಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕೋಸ್ಕರ ತಮ್ಮನ್ನು ಸರ್ಮಪಣೆ ಮಾಡುವ ಕಾರ್ಯಕರ್ತರಿಂದ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾರೆ. ನೀವು ನೀಡಿರುವ ಹೇಳಿಕೆ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ಮಾಡಿದ ಬಹು ದೊಡ್ಡ ಅಪಮಾನವಾಗಿದೆ. ಇದರಿಂದ ತಕ್ಷಣ ದೇಶದ ಜನರಿಗೆ ಶಾಸಕ ಬಾಲಕೃಷ್ಣ, ತಾವು ನೀಡಿರುವ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಲಕೃಷ್ಣ ಹೇಳಿದ್ದೇನು?: ರಾಮನಗರದ ಕಾರ್ಯಕ್ರಮವೊಂದರಲ್ಲಿ ಮಾಗಡಿ ಕ್ಷೇತ್ರದ ಶಾಸಕ ಎಚ್. ಸಿ ಬಾಲಕೃಷ್ಣ ಮಾತನಾಡಿ, ’’ಬಿಜೆಪಿಯವರು ಬ್ರಿಟೀಷರು ಇದ್ದಂಗೆ. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ. ಈ ಹಿಂದೆ, ಪುಲ್ವಾಮ ದಾಳಿಯಾಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ಹಾಗಾಗಿ ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಿರುವ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಬಿಜೆಪಿಯವರು ಯಾರು ಪ್ರಬಲವಾಗಿರುತ್ತಾರೋ ಅವರ ಮಧ್ಯೆ ಗುಂಪು ಮಾಡಿ, ಎತ್ತಿಕಟ್ಟಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಅಂಥ ಸ್ಥಿತಿಗೆ ಬಿಜೆಪಿಯವರು ತಲುಪಿದ್ದಾರೆ ಎಂದು ಶಾಸಕ ಹೆಚ್. ಸಿ ಬಾಲಕೃಷ್ಣ ಲೇವಡಿ ಮಾಡಿದ್ದರು.
ಇದನ್ನು ಓದಿ: ಡಿಕೆಶಿ ಕೇಸ್ ವಾಪಸ್ ಪಡೆದಿರುವುದನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಲಿ: ಸಿಎಂ ಸಿದ್ದರಾಮಯ್ಯ