ಶಿವಮೊಗ್ಗ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಜಿಲ್ಲೆಯ 689 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಆನ್ಲೈನ್ ಮೂಲಕ ಚಾಲನೆ ನೀಡಿದರು.
ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಆನ್ಲೈನ್ ವರ್ಚುಯಲ್ ಮೂಲಕ ಚಾಲನೆ ನೀಡಿದರು. ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ರಸ್ತೆ, ಸೇತುವೆ, ವಿಮಾನ ನಿಲ್ದಾಣ, ನೀರಾವರಿ ಸೇರಿದಂತೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಅದರಲ್ಲೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರ ಜೋಡಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ದಿ ಮಾಡಿರುವುದು ಐತಿಹಾಸಿಕವಾಗಿದೆ ಎಂದರು.
ಓದಿ: ರಾಹುಲ್ ಗಾಂಧಿ ಎಂದಾದರು ಹೊಲ ಉತ್ತಿದ್ದಾರಾ?: ಸಚಿವ ಆರ್.ಅಶೋಕ್
ರಾಜ್ಯದಲ್ಲಿ ಇದುವರೆಗೂ 22 ರಾಷ್ಟ್ರೀಯ ಹೆದ್ದಾರಿಗಳಿದ್ದು, ಮತ್ತೆ 22 ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 423 ಕೋಟಿ ರೂ. ವೆಚ್ಚದಲ್ಲಿ ಕಳಸವಳ್ಳಿ - ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಒಂದು ವರ್ಷದ ಒಳಗಾಗಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 516 ಕೋಟಿ ರೂ. ವೆಚ್ಚದ ಚಿತ್ರದುರ್ಗ- ಶಿವಮೊಗ್ಗ ಚತುಷ್ಪಥ ರಸ್ತೆ ಅಭಿವೃದ್ದಿ ನಡೆಸಲಾಗುತ್ತದೆ.
ಶಿವಮೊಗ್ಗ ನಗರದ ಬಹು ದಿನದ ಬೇಡಿಕೆಯಾಗಿದ್ದ, ವಿದ್ಯಾನಗರದ ಬಳಿ ವೃತ್ತಕಾರದ ರೈಲ್ವೆ ಓವರ್ ಬ್ರಿಡ್ಜ್ ಅನ್ನು 44 ಕೋಟಿ ರೂ. ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಿಟ್ಟೂರು ಮತ್ತು ಹೊಸನಗರ ಭಾಗದಲ್ಲಿ ಶಿಥಿಲಗೊಂಡಿರುವ 7 ಸೇತುವೆಗಳ ಪುನರ್ ನಿರ್ಮಾಣಕ್ಕಾಗಿ 17 ಕೋಟಿ ರೂ. ನೀಡಲಾಗಿದೆ. 96 ಕೋಟಿ ರೂ. ವೆಚ್ಚದಲ್ಲಿ ಸೊಲ್ಲಾಪುರ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ ಕಾರ್ಯ ಚಾಲನೆ ನೀಡಲಾಗಿದೆ ಎಂದರು.
ತೀರ್ಥಹಳ್ಳಿ - ಉಡುಪಿ ರಸ್ತೆಯಲ್ಲಿ 8.20 ಕೋಟಿ ರೂ. ವೆಚ್ಚದಲ್ಲಿ 3 ಕಿರು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಬೈಂದೂರು - ರಾಣೆಬೆನ್ನೂರು ರಸ್ತೆಯನ್ನು 20 ಕೋಟಿ ರೂ. ಮತ್ತು 7 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ವಿಮಾನ ನಿಲ್ದಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದರು.