ಶಿವಮೊಗ್ಗ: ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪರೋಕ್ಷವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಸುಳಿವು ನೀಡಿದ್ದಾರೆ. ಇದು ರಾಜಕೀಯದಲ್ಲಿ ಒಂದು ರೀತಿ ಸಂಚಲನವನ್ನುಂಟು ಮಾಡಿದೆ. ಈ ಬಗ್ಗೆ ಸಿಎಂ ಪುತ್ರ ಹಾಗೂ ಶಿವಮೊಗ್ಗ ಸಂಸದರಾಗಿರುವ ಬಿ.ವೈ. ರಾಘವೇಂದ್ರ 'ಈಟಿವಿ ಭಾರತ' ದೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತಂತೆ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಕಿರು ಸಂದರ್ಶನದಲ್ಲಿ ಮಾತನಾಡಿರುವ ಅವರು, ನಮ್ಮ ತಂದೆ ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರು. ಯಡಿಯೂರಪ್ಪನವರು ಯಾವಾಗಲೂ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡವರು. ಅವರು ರಾಜೀನಾಮೆ ನೀಡುವ ಕುರಿತು ಏನನ್ನು ಮಾತನಾಡಿಲ್ಲ. ಅವರು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಪಕ್ಷದ ಹೈ ಕಮಾಂಡ್ಗೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ: ಬಿ.ಎಸ್.ಯಡಿಯೂರಪ್ಪ
ವಯಸ್ಸು ಮಾನದಂಡವಲ್ಲ:
ವಯಸ್ಸಿನ ಅನುಗುಣವಾಗಿ ಹೈಕಮಾಂಡ್ ಏನು ಸೂಚನೆ ನೀಡುತ್ತದೆಯೋ ಅದರ ಮೇಲೆ ನಿರ್ಧಾರ ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಕ್ಷದಲ್ಲಿ ವಾಲೆಂಟರಿಯಾಗಿ ಅಡ್ವಾಣಿ ಜೀ ಸೇರಿದಂತೆ ಅನೇಕರು ಬೇರೆ ಬೇರೆ ಕಾರಣಗಳಿಂದ ತಮ್ಮ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಆದರೆ, ಪಕ್ಷದಲ್ಲಿ ವಯಸ್ಸನ್ನು ಮೀರಿ ಯಡಿಯೂರಪ್ಪನವರಿಗೆ ಹೈಕಮಾಂಡ್ ಸಿಎಂ ಆಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿ ಕೊಟ್ಟಿದ್ದು ಅವರಿಗೆ ತೃಪ್ತಿ ತಂದಿದೆ. ಮೋದಿ, ಪಕ್ಷದ ಸಂಘಟನೆ ತನಗೆ ಎಲ್ಲವನ್ನೂ ನೀಡಿದೆ ಎಂಬ ಗೌರವ ಅವರಿಗಿದೆ. ವಯಸ್ಸು ಎಂದಿಗೂ ಮಾನದಂಡವಾಗುವುದಿಲ್ಲ. ಎಲ್ಲದನ್ನೂ ಪಕ್ಷ ಕೊಟ್ಟಿದೆ ಎಂದಿದ್ದಾರೆ.
ಯಡಿಯೂರಪ್ಪನವರಿಗೆ ಅವರೇ ಸಾಟಿ :
ಪಕ್ಷವು ತಂದೆ-ತಾಯಿ ಸ್ಥಾನದಲ್ಲಿ ನಿಂತು ಎಲ್ಲವನ್ನೂ ಬಿಎಸ್ವೈಗೆ ನೀಡಿದೆ. ಅವರನ್ನು ಬೆಳೆಸಿ, ಸಂಸ್ಕಾರ ಕಲಿಸಿ, ಮಾರ್ಗದರ್ಶನ ಕೊಟ್ಟಿದೆ. ಇವೆಲ್ಲದರ ಪರಿಣಾಮವಾಗಿ ಜನಹಿತವಾದ ಕೆಲಸಗಳನ್ನು ಮಾಡಿದ್ದಾರೆ. ಇದರಿಂದ ಅವರಿಗೆ ತೃಪ್ತಿ ಇದೆ. ಯಾರೋ ಅವರ ಕಾಲು ಎಳೆಯುತ್ತಿದ್ದಾರೆ ಎಂಬ ಸಂಶಯ ಅವರ ಹೇಳಿಕೆಗಳಲ್ಲಿ ಕಾಣಿಸುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಂಸದ ಬಿ. ವೈ ರಾಘವೇಂದ್ರ ಉತ್ತರಿಸಿದರು.
ಪಕ್ಷದ ಕಾರ್ಯಕರ್ತ ಮಾತ್ರ, ಮಾಜಿ ಅಲ್ಲ:
ತಂದೆಯವರು ಅಟಲ್ ಜೀ ಮಾತನ್ನು ನಮ್ಮ ಬಳಿ ಹೇಳುತ್ತಿದ್ದರು. ಯಾವುದೇ ಸ್ಥಾನ ಶಾಶ್ವತವಲ್ಲ. ಎಲ್ಲವೂ ಒಂದಲ್ಲ ಒಂದು ದಿನ ಮಾಜಿ ಆಗಲೇಬೇಕು. ಸಿಎಂ ಹಾಗೂ ಸಚಿವ ಸ್ಥಾನ ಸೇರಿದಂತೆ ಎಲ್ಲವೂ ಮಾಜಿ ಆಗಬಹುದು. ಆದರೆ ಕಾರ್ಯಕರ್ತನ ಸ್ಥಾನ ಮಾಜಿ ಆಗುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಲಕ್ಷಾಂತರ ಕಾರ್ಯಕರ್ತರ ನಡುವೆ ತಂದೆ ಹೆಮ್ಮರವಾಗಿ ಬೆಳೆದು ಅವರೊಟ್ಟಿಗೆ ಅನೇಕ ಜನರನ್ನು ಬೆಳೆಸಿದ್ದಾರೆ. ಜಾತ್ಯಾತೀತವಾಗಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮುಂದೆಯೂ ಕೂಡ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷವನ್ನು ಬೆಳೆಸಬೇಕೆಂಬ ಆಸೆ ಅವರಲ್ಲಿದೆ ಎಂದರು.
ಅವರ ನಿರ್ಧಾರಕ್ಕೆ ನಾವು ಬದ್ಧ:
ನಮ್ಮ ತಂದೆಯವರು ಎಲ್ಲಾ ನಿರ್ಧಾರವನ್ನು ಯೋಚನೆ ಮಾಡಿ ತೆಗೆದುಕೊಳ್ಳುತ್ತಾರೆ. ಅವರು ತಮ್ಮ ಜೀವನವನ್ನೇ ಪಕ್ಷವನ್ನು ಅಧಿಕಾರಕ್ಕೆ ತರಲು ಮುಡುಪಾಗಿಟ್ಟವರು. ಅವರು ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಪಕ್ಷಕ್ಕೆ ಲಕ್ಷಾಂತರ ಕಾರ್ಯಕರ್ತರನ್ನು ಸೆಳೆದವರು. ಅವರ ನಿರ್ಧಾರವೇ ನಮ್ಮ ನಿರ್ಧಾರ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಓದಿ: ಸಿಎಂ ಹೇಳಿರುವುದಕ್ಕೆ ನಮ್ಮ ಸಹಮತ ಇದೆ: ಕಂದಾಯ ಸಚಿವ ಆರ್.ಅಶೋಕ್