ಶಿವಮೊಗ್ಗ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿಶೇಷ ಕ್ರೀಡಾ ವಲಯವ (ಎಸ್ಎಜಿ) ಯೋಜನೆಯಡಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ಸ್ಥಳ ಪರಿಶೀಲನೆ ಹಾಗೂ ವಿವಿಧ ಯೋಜನೆಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಫೆ. 21ರಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ವಿಶೇಷ ಕ್ರೀಡಾ ವಲಯ ಯೋಜನೆಯಿಂದ ಕೇವಲ ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳ ಕ್ರೀಡಾ ಪ್ರತಿಭೆಗಳನ್ನೂ ಗುರುತಿಸಿ ವೃತ್ತಿಪರ ತರಬೇತಿ ನೀಡುವುದು ಸಾಧ್ಯವಾಗಲಿದೆ. ಇದೊಂದು ಅತ್ಯುತ್ತಮ ತರಬೇತಿ ಕೇಂದ್ರವಾಗಲಿದ್ದು, ಇಡೀ ರಾಜ್ಯದ ಆಸ್ತಿ ಆಗಲಿದೆ. ಸಚಿವರ ಭೇಟಿಯ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಫೆ.18 ರಂದು ಜಿಲ್ಲೆಗೆ ಆಗಮಿಸಿ ಸ್ಥಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಿದರು.
ಓದಿ : ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭ ಮುನ್ಸೂಚನೆ: ಘಮಗುಟ್ಟುತ್ತಿದೆ ಬೆಲ್ಲ..!
ವಿಶೇಷ ಕ್ರೀಡಾ ವಲಯ ಸ್ಥಾಪನೆಗೆ, ಈಗಾಗಲೇ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ಕೃಷಿ ವಿವಿ ಕ್ಯಾಂಪಸ್ನ 50 ಎಕರೆ ಪ್ರದೇಶ ಮತ್ತು ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿರುವ 25 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಂತಿಮಗೊಳಿಸಲಿದ್ದಾರೆ. ಫೆ.21 ರಂದು ಕೇಂದ್ರ ಕ್ರೀಡಾ ಸಚಿವರು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ 4 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ : ಜಿಲ್ಲೆಯಲ್ಲಿರುವ ಪಶುವೈದ್ಯಕೀಯ ಕಾಲೇಜನ್ನು ಪಶುವೈದ್ಯಕೀಯ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ಬಜೆಟ್ನಲ್ಲಿ ಈ ಕುರಿತು ಘೋಷಿಸಲು ಕೋರಲಾಗಿದೆ ಎಂದು ತಿಳಿಸಿದರು.