ಶಿವಮೊಗ್ಗ: ಆರ್ಟಿಕಲ್ 370 ಹಿಂಪಡೆಯದೇ ಹೋಗಿದ್ದರೆ ತಾಲಿಬಾನ್ಗೂ ಜಮ್ಮು ಕಾಶ್ಮೀರಕ್ಕೂ ವ್ಯತ್ಯಾಸ ಇರುತ್ತಿರಲಿಲ್ಲ ಎಂದು ಸಂಸದ ಬಿ. ವೈ ರಾಘವೇಂದ್ರ ಹೇಳಿದ್ದಾರೆ.
ನಗರದ ಅಚ್ಯುತ್ ರಾವ್ ಲೇಔಟ್ನಲ್ಲಿ ಬಿಜೆಪಿ ವಾರ್ಡ್ ಅಧ್ಯಕ್ಷರ ಮನೆಗೆ ನಾಮಫಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ನಂತರ ಮಾತನಾಡಿದರು. ವಿಶೇಷ ರೀತಿಯಲ್ಲಿ ಹಿರಿಯರು ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ಅದರಂತೆ ಪ್ರತಿ ಬೂತ್ ಹಾಗೂ ವಾರ್ಡ್ ಮಟ್ಟದ ಅಧ್ಯಕ್ಷರ ಮನೆಗೆ ನಾಮಫಲಕ ಅಂಟಿಸಲಾಗುತ್ತಿದೆ ಎಂದರು.
ಇಂದು ಏನಾದರೂ ಮೋದಿಜಿ, ಅಮಿತ್ ಷಾ ಅವರು 370 ಆರ್ಟಿಕಲ್ ಹಿಂಪಡೆಯದೆ ಹೋಗಿದ್ದರೆ, ಇಂದು ತಾಲಿಬಾನ್ಗೂ ಜಮ್ಮುಕಾಶ್ಮೀರಕ್ಕೂ ಯಾವುದೇ ವ್ಯತ್ಯಾಸ ಇರುತ್ತಿರಲಿಲ್ಲ. ಅವತ್ತಿನ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕನಸು ನನಸಾಗಿದೆ. ಹಾಗೆಯೇ ಅಡ್ವಾಣಿ ಜೀ ಅವರ ರಥಯಾತ್ರೆ ಫಲ ಇಂದು ಶ್ರೀರಾಮ ಮಂದಿರ ನಿರ್ಮಾಣ ಎಂದು ತಿಳಿಸಿದರು.
ಬಿಜೆಪಿ ಪಕ್ಷ ನಿಂತ ನೀರಲ್ಲ. ಹರಿಯುವ ನದಿ. ಹಾಗಾಗಿ, ಪಕ್ಷ ಸಮುದ್ರ ಆಗಬೇಕು ಎಂದರು. ಇಡೀ ಪ್ರಪಂಚದಲ್ಲಿಯೇ ಅತಿದೊಡ್ಡ ಏಕೈಕ ರಾಷ್ಟ್ರೀಯ ಪಕ್ಷ ಎಂದರೆ ಅದು ಬಿಜೆಪಿ. ಹಾಗಾಗಿ, ಬಿಜೆಪಿ ಕಾರ್ಯಕರ್ತರಾಗಿರುವುದಕ್ಕೆ ಹೆಮ್ಮೆ ಪಡಬೇಕು ಎಂದರು.
ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ಆದರೆ, ಕಾರ್ಯಕರ್ತ ಎನ್ನುವ ಪಟ್ಟ ಶಾಶ್ವತ ಅಂತ ಸಿದ್ದಾಂತ ಇರುವ ಪಕ್ಷ ನಮ್ಮದು. ಹಿರಿಯರ ತ್ಯಾಗದ ಪರಿಶ್ರಮದಿಂದ ಸಂಘಟನೆ ಇಂದು ಈ ರೀತಿ ಬೆಳೆದಿದೆ ಎಂದು ತಿಳಿಸಿದರು.