ಶಿವಮೊಗ್ಗ: ಆಗಸ್ಟ್ 25 ರಂದು ಶಿವಮೊಗ್ಗದಲ್ಲಿ ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ ಎಂದು ಜೆಡಿಎಸ್ನ ಪ್ರಚಾರ ಸಮಿತಿ ಅಧ್ಯಕ್ಷ ವೈ. ಎಸ್. ವಿ ದತ್ತಾ ತಿಳಿಸಿದ್ದಾರೆ.
ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ 4 ಪ್ರಮುಖ ನೀತಿಯ ವಿರುದ್ಧ ವಿಚಾರ ಸಂಕಿರಣವನ್ನು ಆಯೋಜನೆ ಮಾಡಲಾಗಿದೆ ಎಂದರು. ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ, ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆ ಹಾಗೂ ಶಿಕ್ಷಣ ನೀತಿಯ ವಿರುದ್ಧ ವಿಚಾರ ಸಂಕಿರಣ ನಡೆಸಲಾಗುವುದು ಎಂದರು.
ಜನಮತವಿಲ್ಲದೆ ಸುಗ್ರೀವಾಜ್ಞೆಯ ಮೂಲಕ ಕೋವಿಡ್ ಕಾಲವನ್ನು ದುರ್ಬಳಕೆ ಮಾಡಿಕೊಂಡು ಜಾರಿಗೆ ತಂದ ಕಾಯ್ದೆ ಜನಕ್ಕೆ ಮಾರಕವಾಗಿದೆ. ಈ ಹಿನ್ನೆಲೆ ಜನರಿಗೆ ಈ ಕುರಿತು ಅರಿವು ಮೂಡಿಸಲು ವಿಚಾರ ಸಂಕಿರಣ ನಡೆಸಲಾಗುತ್ತಿದೆ. ವಿಚಾರ ಸಂಕಿರಣಕ್ಕೆ ಜೆಡಿಎಸ್ ವರಿಷ್ಠ, ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಆಗಮಿಸಲಿದ್ದಾರೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಸೇರಿದಂತೆ ಇತರರು ಹಾಜರಿದ್ದರು.