ಶಿವಮೊಗ್ಗ: ಸಾಗರ ಶಾಸಕ ಹರತಾಳು ಹಾಲಪ್ಪನವರು ಇಂದು ತಮ್ಮ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯ ವೀಕ್ಷಣೆ ನಡೆಸಿದರು. ಸಾಗರ ಪಟ್ಟಣದಿಂದ ಪ್ರಾರಂಭಿಸಿ ಸಾಗರ ಗ್ರಾಮಾಂತರ ಭಾಗದಲ್ಲಿ ಮಳೆಯಿಂದ ಹಾನಿಯೊಳಗಾದ ಪ್ರದೇಶಗಳನ್ನು ಶಾಸಕರು ವೀಕ್ಷಣೆ ಮಾಡಿದರು.
ಸಾಗರ ಪಟ್ಟಣದ ವಾರ್ಡ್ 21ರ ನೆಹರು ನಗರದ ಒಂದು ಮನೆ, 4 ನೇ ವಾರ್ಡ್ನ ಕೆಳದಿ ರಸ್ತೆಯ ಪೌರ ಕಾರ್ಮಿಕರ ಮನೆಗಳ ಕುಸಿತವಾಗಿದ್ದು, ಅವರ ಮನೆಗಳಿಗೆ ಭೇಟಿ ನೀಡಿ ಮನೆ ವೀಕ್ಷಣೆ ನಡೆಸಿದರು. ಇದೇ ವೇಳೆ ಅಧಿಕಾರಿಗಳಿಗೆ ಹಾನಿಯ ಕುರಿತು ಸೂಕ್ತ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಮಳೆ ನೀರು ನುಗ್ಗಿದ್ದ ಆಸ್ಪತ್ರೆಗೆ ಮಾಜಿ ಶಾಸಕ ಭೇಟಿ:
ಭಾರಿ ಮಳೆ ಹಿನ್ನೆಲೆಯಲ್ಲಿ ನಗರದ ಗುಂಡಪ್ಪ ಶೆಡ್ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಸ್ಪತ್ರೆ ಕಟ್ಟಡದೊಳಗೆ ಮಳೆನೀರು ನುಗ್ಗಿದೆ. ಹೀಗಾಗಿ ಆಸ್ಪತ್ರೆಗೆ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಪ್ರತಿಫಲವಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನವರ ಅವೈಜ್ಞಾನಿಕ ಯೋಜನೆಗಳಿಂದ ಇಂತಹ ಅವ್ಯವಸ್ಥೆ ಉಂಟಾಗಿದೆ. ಹಾಗಾಗಿ ಸಚಿವರು ಕಡುಬಡವರಿಗೆ ಆರೋಗ್ಯ ವ್ಯವಸ್ಥೆ ನೀಡುತ್ತಿರುವ ಆಸ್ಪತ್ರೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ತಗ್ಗಿದ ತುಂಗೆ ಹರಿವು: ನಿಟ್ಟುಸಿರು ಬಿಟ್ಟ ನದಿಪಾತ್ರದ ನಿವಾಸಿಗಳು:
ಜಿಲ್ಲಾದ್ಯಂತ ಕಳೆದ ಮೂರು ದಿನದಿಂದ ಸುರಿದ ಮಳೆಯಿಂದಾಗಿ ಶಿವಮೊಗ್ಗ ನಗರದ ತುಂಗಾ ನದಿಪಾತ್ರದ ನಿವಾಸಿಗಳು ಪ್ರವಾಹದ ಆತಂಕದಲ್ಲಿದ್ದರು. ಆದರೆ ನಿನ್ನೆಯಿಂದ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿದು ಜಿಲ್ಲೆಯ ಜನತೆ ಕೊಂಚ ನಿರಾಳರಾಗಿದ್ದಾರೆ.
ಮೂರು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ನದಿ,ಹಳ್ಳ,ಕರೆ ,ಕಟ್ಟೆಗಳು ತುಂಬಿ ಹರಿಯುತ್ತಿವೆ. ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಹರಿಯುವ ತುಂಗಾ ನದಿಗೆ ತುಂಗಾ ಜಲಾಶಯದಿಂದ 85 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಹಾಗಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಇದರಿಂದಾಗಿ ನದಿ ಪಾತ್ರದ ನಿವಾಸಿಗಳು ಪ್ರವಾಹದ ಆತಂಕದಲ್ಲಿದ್ದರು. ಆದರೆ ಈಗ ಮಳೆ ತಗ್ಗಿದ್ದು, ತುಂಗಾ ನದಿಯ ಹರಿವಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಪ್ರವಾಹದ ಆತಂಕದಲ್ಲಿದ್ದ ಇಮಾಂ ಬಾಡ, ಶಾಂತಮ್ಮ ಲೇಔಟ್, ವಿದ್ಯಾನಗರ, ಹಾಗೂ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಇದೀಗ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.