ಶಿವಮೊಗ್ಗ : ಸಿಎಂ ಬದಲಾವಣೆ ಮಾಡುವುದು ನಮ್ಮಂತಹ ಶಾಸಕರುಗಳಿಗೆ ಬೇಕಿಲ್ಲ. ಕೊರೊನಾದಲ್ಲಿ ಸಿಎಂ ಬಿಎಸ್ವೈ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಿಎಂ ರಾಜೀನಾಮೆ ಕುರಿತು ನಗರದಲ್ಲಿ ಮಾತನಾಡಿದ ಅವರು, ಈಗ ಯಾವುದನ್ನು ಚರ್ಚೆ ಮಾಡುವ ಸಮಯ ಅಲ್ಲ, ಇದು ಕೊರೊನಾ ವಿರುದ್ಧದ ಹೋರಾಟದ ಸಂದರ್ಭ. ಸಿಎಂ ಬದಲಾವಣೆ ಮಾಡಬೇಕು ಅನ್ನುವುದು ಅಸಂಗತದ ಮಾತುಗಳು ಎಂದರು.
ನಂತರ ಮುಂದುವರೆದು ಮಾತನಾಡಿದ ಅವರು, ಇದು ಸಾಧ್ಯವಿಲ್ಲ. ಯಡಿಯೂರಪ್ಪನವರು ಏಕ ಮಾತ್ರ ನಾಯಕರು ನಮಗೆ, ಅವರೇ ಮುಂದುವರೆಯುತ್ತಾರೆ. ಅವರನ್ನು ಬದಲಾವಣೆ ಮಾಡುವಂತಹ ಯಾವ ಇರಾದೆ ನಮ್ಮಂತಹ ಶಾಸಕರಲ್ಲಿ ಇಲ್ಲ. ನಮ್ಮೆಲ್ಲರಿಗೂ ವಿಶ್ವಾಸವಿದೆ, ಯಡಿಯೂರಪ್ಪನವರೇ ಮುಂದುವರೆಯಬೇಕು ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಸೋಂಕನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದಾರೆ. ಖಂಡಿತ ಇದರಲ್ಲಿ ಎರಡು ಮಾತಿಲ್ಲ. ಕೆಲಸ ಇಲ್ಲದವರು ಏನ್ ಬೇಕಾದ್ರೂ ಮಾತಾಡಬಹುದು. ನಮಗೆಲ್ಲಾ ಸಮಯವಿಲ್ಲ. ನಾವು ಜನರ ನಡುವೆ ಹೋಗಬೇಕು.
ಜನರ ಮನೆ ಬಾಗಿಲಿಗೆ ಹೋಗಬೇಕು, ಕೊರೊನಾ ಮುಕ್ತ ಕರ್ನಾಟಕ ಮಾಡಬೇಕು ಎಂಬುದು ನಮ್ಮ ಹಂಬಲ. ಯಡಿಯೂರಪ್ಪ ಬದಲಾದ ತಕ್ಷಣ ಕೊರೊನಾ ಹೋಗುತ್ತದೆಯೇ? ಎಂದು ಮರು ಪ್ರಶ್ನೆ ಮಾಡಿದರು. ಯಾರು ದೆಹಲಿಗೆ ಹೋಗ್ತಾರೆ ಅಂತ ಅವರಿಗೆ ಗೂತ್ತು.
ದೆಹಲಿಗೆ ಹೋಗುವವರೆಲ್ಲಾ ಅದಕ್ಕೆ ಹೋಗ್ತಾರೆ ಅಂತ ಹೇಗೆ ತಿಳಿದುಕೊಳ್ಳುವುದು ಎಂದ ಅವರು, ಯಾವ ಬೇಡಿಕೆಯೂ ಬಂದಿಲ್ಲ. ಯಡಿಯೂಡರಪ್ಪ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಯಡಿಯೂರಪ್ಪರಂತಹ ನಾಯಕರ ನೇತೃತ್ವದ ಅವಶ್ಯಕತೆ ನಮಗೆ ಇದೆ. ನಾವೆಲ್ಲಾ ಅವರ ಪರ ಇದ್ದೇವೆ ಎಂದು ತಿಳಿಸಿದರು.
ಓದಿ: ಪ್ರಜಾ ಪೀಡಕ ಸರ್ಕಾರ ತೈಲ ಬೆಲೆ ಏರಿಸಿ ಜನರ ಬದುಕು ನಾಶ ಮಾಡುತ್ತಿದೆ : ಕಾಂಗ್ರೆಸ್