ಶಿವಮೊಗ್ಗ: ತಮ್ಮ ಹುಟ್ಟೂರು ಕುಬಟೂರಿನ ಕೆರೆಗೆ ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕುಟುಂಬ ಸಮೇತ ಬಾಗಿನ ಅರ್ಪಿಸಿದರು. ಸೊರಬ ತಾಲೂಕಿನ ಕುಬಟೂರು ಗ್ರಾಮದ ಕೆರೆ ಮಳೆ ಹಾಗೂ ಏತ ನೀರಾವರಿಯಿಂದ ತುಂಬಿತ್ತು. ಇದರಿಂದ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂಪ್ರದಾಯದಂತೆ ಬಾಗಿನ ಅರ್ಪಿಸಿದ್ದಾರೆ. ನಂತರ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ನಡೆಸುತ್ತಿರುವ ಸಸ್ಯ ಶ್ಯಾಮಲ ಕಾರ್ಯಕ್ರಮದಡಿ ಗಿಡ ನೆಟ್ಟರು. ಮಕ್ಕಳಿಂದ ಮಣ್ಣು ಹಾಗೂ ನೀರು ಹಾಕಿಸಿದರು. ನಂತರ ಆ ವಿದ್ಯಾರ್ಥಿಗಳಿಗೆ ನೀವೇ ಈ ಗಿಡವನ್ನು ಬೆಳೆಸಿ ದೊಡ್ಡದಾಗಿ ಮಾಡಬೇಕು ಎಂದು ಸೂಚಿಸಿದರು.
ಮಕ್ಕಳೂಂದಿಗೆ ಮಕ್ಕಳಾದ ಶಿಕ್ಷಣ ಸಚಿವರು: ಕುಬಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಒಂದು ಕೊಠಡಿ ನಿರ್ಮಿಸಲಾಗಿತ್ತು. ಈ ಕೊಠಡಿಯನ್ನು ಸಚಿವರು ಇಂದು ಉದ್ಘಾಟಿಸಿದರು. ನಂತರ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಸ್ಡಿಎಂಸಿ ಅವರಿಂದ ಸನ್ಮಾನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಕೂತಿದ್ದ ಕಡೆ ತೆರಳಿ ಅವರ ಮಧ್ಯದಲ್ಲಿ ಕುಳಿತು ಫೋಟೊಗೆ ಪೋಸ್ ನೀಡಿದರು. ನಂತರ ಗ್ರಾಮದ ದ್ಯಾಮವ್ವ ದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದೇ ವೇಳೆ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ತಮ್ಮ ತಂದೆಯವರ ಹುಟ್ಟೂರು, ನನ್ನ ಊರಾದ ಕುಬಟೂರು ಕೆರೆ ತುಂಬಿದ್ದರಿಂದ ಗ್ರಾಮಸ್ಥರೆಲ್ಲ ಸೇರಿ ಬಾಗಿನ ಅರ್ಪಿಸಿದ್ದೇವೆ. ನನ್ನ ಕ್ಷೇತ್ರದಲ್ಲಿ ದೊಡ್ಡ ಕೆರೆ ಇದು. ಇದರಿಂದ ನಮ್ಮೆಲ್ಲ ಗ್ರಾಮಸ್ಥರು ಬಾಗಿನ ಕೊಡಬೇಕು ಅಂತ ಹೇಳಿದ್ದರಿಂದ ಇಂದು ಬಾಗಿನ ನೀಡಲಾಗಿದೆ. ನಾನು ಸಚಿವನಾದ ನಂತರ ಕೆಲಸ ಜಾಸ್ತಿಯಾದ ಕಾರಣ ನಾನು ಬಾಗಿನ ಅರ್ಪಿಸುವುದು ತಡವಾಯಿತು. ಬಾಗಿನ ನೀಡಲು ಒಳ್ಳೆ ದಿನ ನೋಡ್ತಾರೆ, ಅದರಂತೆ ಇಂದು ಬಾಗಿನ ಅರ್ಪಿಸಿದ್ದೇವೆ. ಮುಂದೆ ಚೆನ್ನಾಗಿ ಮಳೆ ಬರಲಿ ಎಂದು ಪ್ರಾರ್ಥಿಸಿದರು.
ಈಗ ಕರೆಂಟ್ ಸಮಸ್ಯೆ ಸ್ವಲ್ಪ ಭಾಗಶಃ ಪರಿಹಾರವಾಗಿದೆ. ಈ ಭಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೂರು ಬಾರಿ ನಡೆಸಲು ತೀರ್ಮಾನ ಮಾಡಿದ್ದೆವು. ಇದಕ್ಕೆ ಟೀಕೆಗಳು ಸಹ ಬಂದವು. ಆದರೆ ಟೀಕೆಗೆ ಉತ್ತರ ಎಂಬಂತೆ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದ, 1.19 ಲಕ್ಷ ವಿದ್ಯಾರ್ಥಿಗಳಲ್ಲಿ 41 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಓದುವ ವಿದ್ಯಾರ್ಥಿಗಳನ್ನು ಫೈಲ್ ಮಾಡದೆ ಅವರಿಗೆ ಓದುವ ಒಂದು ಅವಕಾಶವನ್ನು ನೀಡಬೇಕು. ಎಸ್ಎಸ್ಎಲ್ಸಿ ಪರೀಕ್ಷೆಗೂ ಇದೇ ನಿಯಮವನ್ನು ವಿಸ್ತರಿಸಲು ನಿರ್ಧಾರಿಸಲಾಗಿದೆ ಎಂದರು.
ನಮ್ಮ ಸರ್ಕಾರ ಹೊಸದಾಗಿ ಬಂದಿದೆ. ಸಮಸ್ಯೆ ಸಾಕಷ್ಟಿದೆ. ಇದನ್ನು ನಾವು ಪರಿಹರಿಸುತ್ತೇವೆ. ಸಮಸ್ಯೆಗಳ ಪರಿಹಾರಕ್ಕೆ ಸಮಯ ಬೇಕಾಗುತ್ತದೆ. ಅವಶ್ಯಕತೆಗೆ ತಕ್ಕಂತೆ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಾನು ಶಿಕ್ಷಣ ಇಲಾಖೆಗೆ ಬಂದ ಮೇಲೆ ಸ್ವಲ್ಪ ಬದಲಾವಣೆ ಆಗಿದೆ. ಇದರಿಂದ ಮಕ್ಕಳಿಗೆ ಸಸಿ, ಮರ ಗಿಡ ಪರಿಸರದ ಬಗ್ಗೆ ಅರಿವು ಮೂಡಿಸಲು ಸಸ್ಯ ಶಾಮಲ ಯೋಜನೆ ಜಾರಿ ಮಾಡಲಾಗಿದೆ. ನಿನ್ನೆ ಕೆಂಗಲ್ ಹನುಮಂತ ಅವರು ಓದಿದ ಶಾಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಇಂದು ನನ್ನ ಊರಿನಲ್ಲಿ ಚಾಲನೆ ನೀಡಿದ್ದೇನೆ. 50 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ ಎಂದರು.
ಇದನ್ನೂ ಓದಿ : ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ನಾಲ್ಕೈದು ದಿನಗಳಲ್ಲಿ ತೀರ್ಮಾನ: ಮಧು ಬಂಗಾರಪ್ಪ