ಶಿವಮೊಗ್ಗ: ಭಾರತೀಯ ಜನತಾ ಪಾರ್ಟಿ ದೊಡ್ಡದಾಗಿದೆ. ಹಾಗಾಗಿ ಸಹಜವಾಗಿಯೇ ಆಕಾಂಕ್ಷಿಗಳು ಹೆಚ್ಚಿದ್ದಾರೆ. ನಮ್ಮ ಪಕ್ಷದ ಶಾಸಕರಲ್ಲಿ ಅಸಮಾಧಾನ ಇರುವುದು ನಿಜವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಕುಟುಂಬದ ವ್ಯವಸ್ಥೆಯಲ್ಲಿದೆ. ಕುಟುಂಬದಲ್ಲಿರುವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದನ್ನು ಅಸಮಾಧಾನ ಎನ್ನುವುದಾದರೆ ಅಸಮಾಧಾನ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ ಎಂದರು.
ನಿನ್ನೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ಸ್ಥಾನ ಕೊಟ್ಟರೆ ಅನುಕೂಲವಾಗುತ್ತದೆ ಎಂಬ ನಮ್ಮ ಭಾವನೆಯನ್ನು ಕೇಂದ್ರ ಸಮಿತಿಗೆ ಕಳುಹಿಸಿಕೊಡಲಾಗಿದೆ. ಕೇಂದ್ರ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಅಸಮಾಧಾನ ಇರುವವರಿಗೆ ತೃಪ್ತಿಪಡಿಸುವ ಕೆಲಸವನ್ನು ಪಕ್ಷ ಮಾಡುತ್ತದೆ. ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಅಸಮಾಧಾನವನ್ನು ಬಗೆಹರಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಕಾಂಗ್ರೆಸ್ನವರು ಅವರ ಪಕ್ಷವನ್ನು ಉಳಿಸಿಕೊಳ್ಳಲಾಗದೆ ಸರ್ಕಾರ ಕಳೆದುಕೊಂಡರು. ಜೆಡಿಎಸ್ ಮೇಲೆ ಎದ್ದೇಳುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಅಸಮಾಧಾನದ ಲಾಭ ಪಡೆದುಕೊಳ್ಳುತ್ತಾರೆ ಎನ್ನುವುದು ಹಾಸ್ಯಾಸ್ಪದ ಎಂದು ಸಚಿವ ಈಶ್ವರಪ್ಪ ಹೇಳಿದ್ರು.