ಶಿವಮೊಗ್ಗ : ಕ್ರಾಸ್ ಬ್ರೀಡ್ ಅಂತಾ ನಾವು ಪ್ರಾಣಿಗಳಿಗೆ ಹೇಳ್ತೇವೆ, ಮನುಷ್ಯರಿಗಲ್ಲ. ಇದರಿಂದ ಕ್ರಾಸ್ ಬ್ರೀಡ್ ಕುರಿತ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ವಾಪಸ್ ಪಡೆದು, ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕ್ರಾಸ್ ಬ್ರೀಡ್ ಪದ ಅತ್ಯಂತ ಕೆಟ್ಟದ್ದು, ಸಿದ್ದರಾಮಯ್ಯನವರಿಗೆ ಹೆಣ್ಣು ಮಕ್ಕಳು ಅಂದ್ರೆ ಗೌರವವಿಲ್ಲ. ಇವರ ದೃಷ್ಟಿಯಲ್ಲಿ ಹೆಣ್ಣುಮಕ್ಕಳು ಅಂದ್ರೆ ಇವರು ಕಾಮಕ್ಕೆ ಬಳಸಿಕೊಳ್ಳುತ್ತಾರೆ ಅಷ್ಟೇ ಅಂದ್ರು.
ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ತೃಪ್ತಿಪಡಿಸಿಕೊಳ್ಳಬಹುದು ಅಂತಾ ಅವರು ತಿಳಿದು ಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಹಿಂದೂ ಯುವಕರು ಗಟ್ಟಿ ಇರುವುದರಿಂದ ಇಲ್ಲಿ ಹೆಚ್ಚಿನ ಮತಾಂತರ ನಡೆಯಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಕ್ರಾಸ್ ಬ್ರೀಡ್ ಹೆಚ್ಚಿದೆ : ಕಾಂಗ್ರೆಸ್‌ನಲ್ಲಿಯೇ ಕ್ರಾಸ್ ಬ್ರೀಡ್ ಹೆಚ್ಚಿದೆ. ಇಂದಿರಾಗಾಂಧಿ ಫಿರೋಜ್ ಗಾಂಧಿಯನ್ನು ಮದುವೆಯಾದ್ರು. ಸೋನಿಯಾ ಗಾಂಧಿ ರಾಜೀವ್ ಗಾಂಧಿಯನ್ನು ಮದುವೆಯಾದ್ರು. ಇದನ್ನು ನೋಡಿ ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಂದ್ರೆ ನಮಗೆ ಸ್ವಾತಂತ್ರ್ಯ ಹೋರಾಟಗಾರರು ನೆನಪಾಗುತ್ತಾರೆ. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರಲು, ಇರುವುದಕ್ಕೆ ಅನರ್ಹರು ಎಂದರು. ಇದರಿಂದ ಸಿದ್ದರಾಮಯ್ಯ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದರು.
ಗೋ ನಿಷೇಧ ಸಿದ್ದುಗೆ ಟಾಂಗ್ : ಗೋಹತ್ಯೆ ನಿಷೇಧ ಕಾನೂನು ತಂದೆ ತರುತ್ತೇವೆ. ವಯಸ್ಸಾದ ಗೋವುಗಳನ್ನು ಬಿಜೆಪಿಯವರ ಮನೆ ಮುಂದೆ ಬಿಡಬೇಕೆ ಎಂದು ಸಿದ್ದರಾಮಯ್ಯ ನಿನ್ನೆ ಕೇಳಿದ್ರು, ಇದಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯನವರ ತಾಯಿಗೆ ವಯಸ್ಸಾಗಿದೆ ಅಂತಾ ಬೇರೆ ಕಡೆ ಬಿಟ್ಟು ಬರ್ತಾರಾ ಎಂದು ಪ್ರಶ್ನಿಸಿದ್ರು. ಗೋವುಗಳ ಬಗ್ಗೆ ನಿರ್ಲಕ್ಷ್ಯ ತೋರಿದಕ್ಕೆ ಕಾಂಗ್ರೆಸ್ ನಿರ್ನಾಮವಾಗಿದೆ ಎಂದು ಗರಂ ಆದರು.
ನಾನು ಕುರುಬ ನಾಯಕ ಅಲ್ಲ : ನಾನು ಕುರುಬ ನಾಯಕ ಅಲ್ಲ, ನಾನೊಬ್ಬ ಹಿಂದೂತ್ವದ ಪ್ರತಿಪಾದಕ. ಹಿಂದೂತ್ವದ ಕಾರ್ಯಕರ್ತ. ನಾನು ಅಹಿಂದ ನಾಯಕ ಅಂತಾ ಹೇಳಿದ್ರಲ್ಲ. ನಿಮ್ಮ ಹಿಂದೆ ಎಷ್ಟು ಜನ ಅಹಿಂದ ನಾಯಕರಿದ್ದಾರೆ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದರು.