ಶಿವಮೊಗ್ಗ : ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಅಲ್ಲೋಲ-ಕಲ್ಲೋಲ ಆಗುತ್ತದೆ. ಕಾಂಗ್ರೆಸ್ನ ನಿಷ್ಠಾವಂತ ರಾಜಕಾರಣಿ ಎಸ್.ಆರ್.ಪಾಟೀಲ್ರಂತಹವರಿಗೆ ಟಿಕೆಟ್ ನೀಡದಿರುವುದು ಹಾಗೂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಗುದ್ದಾಟ ಸ್ಪೋಟವಾಗಲಿದೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ದಿಗೆ ನೀಡಿದ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಲಿವೆ ಎಂದರು.
ಮೊನ್ನೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಡಿಕೆಶಿ ಅವರು ಯಡಿಯೂರಪ್ಪನವರ ಕಣ್ಣೀರಲ್ಲಿ ಬಿಜೆಪಿ ತೊಳೆದು ಹೋಗುತ್ತದೆ ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಶಿವಕುಮಾರ್‌ರವರೆ ನೀವು ಯಾಕೆ ತಿಹಾರ್ ಜೈಲ್ಗೆ ಹೋಗಿದ್ರಿ, ನೀವು ಜೈಲಿಗೆ ಹೋದಾಗ ನಿಮ್ಮ ತಾಯಿ ಕಣ್ಣೀರು ಹಾಕಿದ್ರಲ್ಲಾ, ಆ ಶಾಪ ನಿಮಗೆ ತಟ್ಟುತ್ತೋ ಇಲ್ಲ ಕಾಂಗ್ರೆಸ್ಗೆ ತಟ್ಟುತ್ತೋ ಎಂದು ಪ್ರಶ್ನೆ ಮಾಡಿದರು.
ಇನ್ನು ಸಿದ್ದರಾಮಯ್ಯನವರು ನನ್ನ ಇಲಾಖೆಯಲ್ಲಿ ಒಂದೂ ವಸತಿ ನೀಡಿಲ್ಲ ಎಂದಿದ್ದಾರೆ. ನೀವು ಸಿಎಂ ಆಗಿದ್ದವರು, ನಿಮಗೆ ಯಾವ ಇಲಾಖೆಯಲ್ಲಿ ಏನು ಆಗುತ್ತದೆ ಎಂದು ತಿಳಿದಿಲ್ಲ. ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ ಎಂದು ತಿರುಗೇಟು ನೀಡಿದರು.
ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಮನೆ ಹಂಚೋಕೆ ಬರಲ್ಲ. ನೀವು ಅಜ್ಞಾನಿಯಾಗಿದ್ದೀರಾ ಎಂದು ಪ್ರಶ್ನೆ ಮಾಡಿದರು. ನನಗೆ ಸಂಬಂಧವಿಲ್ಲದ ವಸತಿ ಇಲಾಖೆ ಬಗ್ಗೆ ನನಗೆ ಹೇಳುತ್ತೀರಲ್ಲ ಎಂದರು.
ಸಿದ್ದರಾಮಯ್ಯನವರಿಗೆ ಈ ಪದಗಳ ಬಳಕೆ ಮಾಡದೆ ಹೋದ್ರೆ ಅವರಿಗೆ ತಿಂದ ಅನ್ನ ಕರಗಲ್ಲ. ಹೀಗಾಗಿ, ಇಲ್ಲಿಗೆ ಬಂದು ನನ್ನ ವಿರುದ್ಧ ಮಾತನಾಡಿದ್ದಾರೆ.
ನಾನು ಇಲ್ಲವೇ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ನಾನು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ನಿರಾಣಿಗೆ ಅವಕಾಶವಿದೆ ಎಂದು ಹೇಳಿದ್ದೇನೆ. ಈಗಲೇ ಸಿಎಂ ಆಗುತ್ತಾರೆ ಎಂದು ಹೇಳಿದ್ದೀನಾ ಎಂದರು.
ನಾನು ಏನಾದ್ರೂ ಹೇಳುತ್ತೇನೆ, ಅದಕ್ಕೂ ಅವರಿಗೂ ಸಂಬಂಧವಿಲ್ಲ. ನಾನು ಏನಾದ್ರೂ ಹೇಳುತ್ತೇನೆ ಅದನ್ನು ಕೇಳೋಕೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಯಾರು?. ಅವರಿಬ್ಬರ ಬಗ್ಗೆ ನನಗೆ ಗೌರವವಿದೆ ಎನ್ನುತ್ತಲೇ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಿದ್ದುಗೆ ಜಮೀರೇ ಗತಿ : ಸಿದ್ದರಾಮಯ್ಯ ಮುಂದಿನ ಬಾರಿ ಬದಾಮಿಯಲ್ಲಿ ನಿಲ್ಲೋದಿಲ್ಲ. ಅವರಿಗೆ ಜಮೀರೇ ಗತಿ. ಅವರ ಕಾಲು ಹಿಡಿದುಕೊಂಡು ಚಾಮರಾಜಪೇಟೆಯಲ್ಲಿ ನಿಲ್ಲುತ್ತಾರೆ ಎಂದರು. ನಾನು ಎಂದು ಹಿಂದುಳಿದ ನಾಯಕನಾಗಲು ಹೊರಟಿಲ್ಲ. ಕುರುಬ ನಾಯಕನಾಗಲು ಇವರು ಯಾಕೆ ಪ್ರತಿಕ್ರಿಯಿಸಬೇಕು ಎಂದರು.
ಮುತ್ತು-ರತ್ನ ಹೋಲಿಕೆ ಸಂತಸ : ನನಗೂ ಹಾಗೂ ಜ್ಞಾನೇಂದ್ರರವರಿಗೆ ಮುತ್ತು-ರತ್ನ ಎಂದು ಹೋಲಿಕೆ ಮಾಡಿದಕ್ಕೆ ಸಂತಸವಾಗಿದೆ. ಕಲ್ಲುಬಂಡೆ ಈ ರೀತಿ ಹೇಳುತ್ತಲ್ಲಾ ಎಂದು ಸಂತಸವಾಗಿದೆ. ಇವರು ಕಲ್ಲು ಬಂಡೆಯಲ್ಲಿ ಎಷ್ಟು ಅಕ್ರಮ ಮಾಡಿದ್ರು, ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ನನ್ನ ಬಾಯಿಯಲ್ಲಿ ಬರುವ ಪದವನ್ನು ಜ್ಞಾನೇಂದ್ರ ಬಳಸಿದ್ದಾರೆ : ಗೋ ಸಾಗಣೆಯನ್ನು ತಡೆಯಲು ಹೋದವರ ಮೇಲೆ ವಾಹನ ಹತ್ತಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಅವರ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಅವರ ಡ್ಯೂಟಿ ನೆನಪು ಮಾಡಿ ಕೊಟ್ಟಿದ್ದಾರೆ.
ಪೊಲೀಸರಿಗೆ ಬೈಯ್ದದ್ದು ಸರಿಯಾಗಿದೆ. ಅವೆಲ್ಲಾ ನನ್ನ ಬಾಯಿಯಲ್ಲಿ ಬರುವಂತದ್ದು. ಆದರೆ, ಜ್ಞಾನೇಂದ್ರ ಬಾಯಲ್ಲಿ ಯಾಕೆ ಬಂತು ಅಂತಾ ಗೊತ್ತಾಗುತ್ತಿಲ್ಲ ಎಂದರು. ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿಯನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಈ ತಂತ್ರ ಅನುಸರಿಸಿದ್ದಾರೆ. ಮೊದಲ ಪ್ರಾಶತ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿಗೆ ಕೇಳುತ್ತಿದ್ದಾರೆ ಎಂದರು.