ಮೈಸೂರು: ನಗರದ ಚಲುವಾಂಬ ಆಸ್ಪತ್ರೆ ಆವರಣದಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿ ಗ್ರಾಮದ ನಾಗೇಶ್(47) ಮೃತರು.
ನಾಗೇಶ್ ಹೆರಿಗೆಗೆ ಅಂತ ತನ್ನ ಪತ್ನಿಯನ್ನು ಕಳೆದ ಶುಕ್ರವಾರ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಅಂದೇ ಪತ್ನಿಗೆ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿತ್ತು. ಆರೋಗ್ಯ ಸಮಸ್ಯೆ ಕಾರಣ ಮೂರು ದಿನಗಳಿಂದಲೂ ಮಗುವನ್ನು ಐಸಿಯುವಿನಲ್ಲಿ ಇಡಲಾಗಿತ್ತು. ಹೀಗಾಗಿ ನಾಗೇಶ್ ತನ್ನ ಮಗುವಿನ ಮುಖವನ್ನು ಸರಿಯಾಗಿ ನೋಡಲಾಗಿರಲಿಲ್ಲ ಎಂದು ತಿಳಿದು ಬಂದಿದೆ.
ಪತ್ನಿಯ ಆರೈಕೆಗಾಗಿ ನಾಗೇಶ್ ಆಸ್ಪತ್ರೆಯಲ್ಲೇ ತಂಗಿದ್ದರು. ನಾಗೇಶ್ ಭಾನುವಾರ ರಾತ್ರಿ ಸುಮಾರು 10.30ರ ವೇಳೆ ಆಸ್ಪತ್ರೆ ಮುಂಭಾಗದ ಆವರಣದಲ್ಲಿ ಮಲಗಿದ್ದರು. ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನೋಡಿದಾಗ ನಾಗೇಶ್ ಮೃತಪಟ್ಟಿರುವುದು ತಿಳಿದು ಬಂದಿದೆ. ವ್ಯಕ್ತಿಯ ಮೃತದೇಹವನ್ನು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಆಸ್ಪತ್ರೆ ಆವರಣದಲ್ಲಿ ಮಲಗಿದ್ದ ನಾಗೇಶ್ ಸ್ಥಳದಲ್ಲೇ ಸಾವು: "ನಾಗೇಶ್ ಕಳೆದ ಶುಕ್ರವಾರ ಹೆರಿಗೆಗಾಗಿ ತನ್ನ ಹೆಂಡತಿಯನ್ನು ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದ. ನಾಗೇಶ್ ಪತ್ನಿಗೆ ಗಂಡು ಮಗು ಜನಿಸಿದೆ. ಆಸ್ಪತ್ರೆಯಲ್ಲೇ ಇದ್ದು ಪತ್ನಿ ನೋಡಿಕೊಳ್ಳುತ್ತಿದ್ದ. ನಿನ್ನೆ ರಾತ್ರಿ ಚೆಲುವಾಂಬ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ನಾಗೇಶ್, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಚೆನ್ನಾಗಿ ಕೂಲಿ ಕೆಲಸ ಮಾಡಿಕೊಂಡಿದ್ದ. ಏನಾಗಿದೇ ಎಂಬುವುದು ಗೊತ್ತಿಲ್ಲ" ಎಂದು ಮೃತ ನಾಗೇಶ್ನ ಅಣ್ಣ ಶಿವ ಗೋವಿಂದ್ ಹೇಳಿದರು.
ಆಸ್ಪತ್ರೆಯ ಅಧೀಕ್ಷಕಿ ಸುಧಾ ಮಾತನಾಡಿ, "ಸೀರಿಯಸ್ ಕೇಸ್ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ನಾಗೇಶ್ ಶುಕ್ರವಾರ ತನ್ನ ಹೆಂಡತಿಯನ್ನು ಹೆರಿಗೆಗೆ ತಂದು ದಾಖಲು ಮಾಡಿದ್ದರು. ಹೆಂಡತಿ ಜೊತೆ ಅವರೊಬ್ಬರೇ ಇದ್ದರು. ಹೊರಗಡೆ ಡಾರ್ಮೆಂಟರಿ ಇದ್ದರೂ ಅವರು ಆಸ್ಪತ್ರೆ ಆವರಣದಲ್ಲೇ ಮಲಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈಗ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು.
ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು ತಂಗುದಾಣದ ವ್ಯವಸ್ಥೆ ಇದೆ: "ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಸಾವಿಗೆ ನಿಖರ ಕಾರಣ ಗೊತ್ತಿಲ್ಲ, ಮರಣೋತ್ತರ ಪರೀಕ್ಷೆ ಬಳಿಕ ಏನಾಗಿದೆ ಎಂದು ಗೊತ್ತಾಗಲಿದೆ. ಈಗಿರುವ ಡಾರ್ಮೆಂಟರಿಯಲ್ಲಿ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ತಂಗಲು ಅವಕಾಶ ಮಾಡಿಕೊಡುತ್ತೇವೆ. ಕಾರ್ಡ್ ಇಲ್ಲದವರಿಗೆ 30 ರೂ ಚಾರ್ಚ್ ಮಾಡುತ್ತೇವೆ. ಈಗಾಗಲೇ ರೋಗಿಗಳ ಸಂಬಂಧಿಕರು ಉಳಿದುಕೊಳ್ಳಲು ತಂಗುದಾಣದ ವ್ಯವಸ್ಥೆ ಮಾಡಿದ್ದೇವೆ. ಹೆಚ್ಚಿನ ಜನ ಹೊರಗಡೆಯೇ ಮಲಗುತ್ತಾರೆ " ಎಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಯುವ ಪತ್ರಕರ್ತ ಭರತ್ ಸಾವು