ಶಿವಮೊಗ್ಗ: ಸಂದರ್ಭ ಬಂದರೆ ನಾನು ಶಾಸಕ ಕ್ಷೇತ್ರವನ್ನಾದರೂ ಬಿಡುವೆ ಆದರೆ, ಸಹಕಾರಿ ಕ್ಷೇತ್ರವನ್ನು ಬಿಡುವುದಿಲ್ಲ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದರು. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ನಡೆದ 70ನೇ ಅಖಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಸಮಯ ಬಂದರೆ ನಾನು ಶಾಸಕ ಸ್ಥಾನವನ್ನು ಬಿಡುತ್ತೇನೆ ಹೊರತು. ಸಹಕಾರಿ ಕ್ಷೇತ್ರವನ್ನು ಬಿಡುವುದಿಲ್ಲ. ಸಹಕಾರಿ ಕ್ಷೇತ್ರದಲ್ಲಿ ಎಲ್ಲ ವರ್ಗದವರಿಗೆ ಸಹಾಯ ಮಾಡುವ ಅವಕಾಶವಿದೆ. ಸದ್ಯ ಶಿವಮೊಗ್ಗದಿಂದ ಸಹಕಾರ ಸಪ್ತಾಹ ದಿನವನ್ನು ಪ್ರಾರಂಭ ಮಾಡಿದ್ದೇವೆ. ಸಮಾಜವಾದಿ ನೆಲೆಯಾದ ಶಿವಮೊಗ್ಗದಿಂದ ಈ ಮೂಲಕ ಸಹಕಾರ ಕ್ಷೇತ್ರಕ್ಕೆ ಹೊಸ ಮೆಸೇಜ್ ನೀಡಲು ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ 500 ಟ್ರಿಲಿಯನ್ ಆರ್ಥಿಕ ಗುರಿ ಸಾಧಿಸುವ ಪ್ರಯತ್ನ ಸಹಕಾರ ಕ್ಷೇತ್ರದ ಮುಂದಿದೆ ಎಂದರು.
ನೆಹರು ಜನ್ಮ ದಿನದಂದೇ ಸಹಕಾರ ಸಪ್ತಾಹ ಮಾಡಲಾಗುತ್ತಿದೆ. ಕೇವಲ ಕರ್ನಾಟಕವಷ್ಟೇ ಅಲ್ಲದೆ ಭಾರತದೆಲ್ಲೆಡೆ ನಡೆಸಲಾಗುತ್ತದೆ. ಸಹಕಾರಿ ಆಂದೋಲನದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು. ಸಹಕಾರಿ ಆಂದೋಲನವನ್ನು ನಾವೆಲ್ಲ ಯಶಸ್ವಿ ಮಾಡಬೇಕಿದೆ. ಸಹಕಾರಿ ರಂಗಕ್ಕೆ ಮತ್ತಷ್ಟು ಯುವಕರು ಸೇರ್ಪಡೆಯಾಗಬೇಕು. ಸಹಕಾರ ರಂಗದಲ್ಲಿ ಸದ್ಯ ಕೆಲವು ಸಮಸ್ಯೆಗಳಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಬುದ್ಧಿ ಶಕ್ತಿಯನ್ನು ಅಧಿಕಾರಿಗಳು ತೋರ್ಪಡಿಸಬೇಕು ಎಂದು ಸಚಿವರು ಕೆಲವು ಸಲಹೆ ನೀಡಿದರು.
ಸಹಕಾರ ಸಂಘದಿಂದ ನೀಡುವ ಸಾಲದಲ್ಲಿ ಸರ್ಕಾರದ ಒಂದೂ ರೂಪಾಯಿ ಕೂಡ ಇರುವುದಿಲ್ಲ. ಸಾಲ ನೀಡುವ ಹಣವು ಠೇವಣಿದಾರರ ಹಣವಾಗಿದೆ. ನಬಾರ್ಡ್ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಒಂದೆರಡು ದಿನಗಳಲ್ಲಿ ಡಿಸಿಸಿ ಬ್ಯಾಂಕ್ಗೆ ಬರಲಿದೆ ಎಂದು ಭರವಸೆ ನೀಡಿದರು.
ಸಹಕಾರ ಕ್ಷೇತ್ರದ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಸಹಕಾರಿಗಳು ಪಕ್ಷಾತೀತವಾಗಿ ಇರುವ ನಾಯಕರುಗಳು. ನೀವು ಇಷ್ಟು ಹೊತ್ತು ನೀಡಿದ ಲೆಕ್ಕವು ನಮಗೆ ನಮ್ಮಪ್ಪನ ಅಣೆಗೂ ಅರ್ಥವಾಗಲಿಲ್ಲ. ದಯಮಾಡಿ ರೈತರ ಪರವಾಗಿ ಸಾಲ ನೀಡಿ ಎಂದಷ್ಟೇ ಹೇಳಿದರು. ಜಿಟಿ ದೇವೆಗೌಡರು ಮೊದಲಿನಿಂದಲೂ ನಮ್ಮ ಜೊತೆ ಇದ್ದವರು. ನಮ್ಮ ಜೊತೆ ಹೀಗೆ ಇರುವಿರೆಂದು ಭಾವಿಸುವೆ ಎನ್ನುವ ಮೂಲಕ ಸಚಿವರು ಇದೇ ವೇಳೆ ಪರೋಕ್ಷವಾಗಿ ಅವರಿಗೆ ಪಕ್ಷಕ್ಕೆ ಆಹ್ವಾನ ನೀಡಿದರು.
ಸಹಕಾರಿಗಳಾಗಿ ನಾವೆಲ್ಲ ಒಂದು ಕಡೆ ಎಲ್ಲರಿಗೂ ಸಹಾಯ ಮಾಡುತ್ತಿದ್ದೇವೆ. ಸ್ವಾಯತ್ತತೆ ಉಳಿಸಲು ದಕ್ಷತೆ ಬೇಕು. ಅದು ರಾಜಣ್ಣನವರಿಗೆ ಇದೆ. ಸಹಕಾರ ಜ್ಯೋತಿ ಹಾಗೂ ದೀಪಾವಳಿ ಜ್ಯೋತಿ ಎರಡೂ ಬೆಳಗಲಿ. ಸಹಕಾರ ಸೂಸೈಟಿ ಧರ್ಮಸ್ಥಳ ಸಂಘದಂತೆ ನಡೆಸಬೇಕಿದೆ. ದೇಶಕ್ಕೆ ಸಹಕಾರ ಕ್ಷೇತ್ರವೇ ಹೆಬ್ಬಾಗಿಲು. ಸಹಕಾರ ಕ್ಷೇತ್ರ ಉಳಿಸಲು ಪಕ್ಷಾತೀತ, ಜಾತ್ಯತೀತವಾಗಿ ಕೆಲಸ ಮಾಡಬೇಕಿದೆ ಎಂದರು.
ಇದನ್ನೂ ಓದಿ: ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಸಹಕಾರ, ಅನುದಾನ ನೀಡಲಿದೆ: ಸಿಎಂ ಸಿದ್ದರಾಮಯ್ಯ