ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದಿಲ್ಲ, ಬಿಜೆಪಿ ಸರ್ಕಾರವು ಪೂರ್ಣಾವಧಿ ಆಡಳಿತ ನಡೆಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ಸ್ಥಾನಕ್ಕಾಗಿ ಕಾಂಗ್ರೆಸ್ನವರು ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಪಕ್ಷ ನಾಯಕರಾಗಲು ಸಿದ್ದರಾಮಯ್ಯನರು ಹೋರಾಡುತ್ತಿದ್ದು, ಅವರು ದೆಹಲಿಗೆ ಹೋದರೂ ಸೋನಿಯಾ ಗಾಂಧಿ ಅವರಿಗೆ ಕ್ಯಾರೆ ಎಂದಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಶಿವಕುಮಾರ್ ತಪ್ಪಿತಸ್ಥರಾದರೆ ಅವರಿಗೆ ಜಾಮೀನು ಸಿಗುವುದಿಲ್ಲ. ತಪ್ಪಿತಸ್ಥರಲ್ಲದಿದ್ರೆ ಜಾಮೀನು ಪಡೆದು ಹೊರ ಬರ್ತಾರೆ. ಡಿಕೆಶಿ ಪರ ಕಾಂಗ್ರೆಸ್ ಮುಖಂಡರು ಮಾತನಾಡುತ್ತಿಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮೊದಲು ಮಾತನಾಡುತ್ತಿದರು, ಈಗ ಸುಮ್ಮನಾಗಿದ್ದಾರೆ. ಕಾನೂನು ಹೋರಾಟ ಮಾಡುತ್ತೇನೆ ಅಂತ ಶಿವಕುಮಾರ್ ಅವರೇ ಹೇಳಿದ್ದಾರೆ ಎಂದರು.
ಕಾಲಮಿತಿ ಒಳಗೆ ಅಭಿವೃದ್ಧಿ ಯೋಜನೆ ಪೂರ್ಣಗೊಳಿಸಿ:
ಇದಕ್ಕೂ ಮುನ್ನ ಸಚಿವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ನಗರದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಿ ಕಾಲಮಿತಿಯ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲೆಗಳ ದುರಸ್ತಿಗೆ ಆದ್ಯತೆ:
ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ 86ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನ ಲಭ್ಯವಿದ್ದು, ಇನ್ನು ಒಂದು ತಿಂಗಳ ಒಳಗಾಗಿ ಕಾಮಗಾರಿಗಳನ್ನು ಆರಂಭಿಸಬೇಕು. ಶಾಲೆಗಳ ದುರಸ್ತಿಗೆ 8ಕೋಟಿ ರೂ. ಹಾಗೂ 47 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 4.84 ಕೋಟಿ ರೂ. ಮಂಜೂರಾತಿ ನೀಡಲಾಗಿದೆ. ಒಟ್ಟು 5.36 ಕೋಟಿ ರೂ. ಲಭ್ಯವಿದ್ದು, ಇನ್ನುಳಿದ ಅನುದಾನವನ್ನು ಲೋಕೋಪಯೋಗಿ ಇಲಾಖೆ ಮೂಲಕ ಬಿಡುಗಡೆಗೊಳಿಸಲಾಗುವುದು. ಶಾಲೆಗಳ ದುರಸ್ತಿ ಮತ್ತು ಶೌಚಾಲಯ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಂಡು ನವೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯ ಎಲ್ಲಾ 35 ವಾರ್ಡ್‍ಗಳಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ 15ದಿನಗಳ ಒಳಗಾಗಿ ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ತಿಳಿಸಿದ ಸಚಿವರು, ಪಾಲಿಕೆಯ ವ್ಯಾಪ್ತಿಯಲ್ಲಿರುವ ಒಟ್ಟು 392 ಪಾರ್ಕ್‍ಗಳ ಪೈಕಿ ಪ್ರಸ್ತುತ ಸಾಲಿನಲ್ಲಿ 100 ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 24 ಪಾರ್ಕ್‍ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, 8 ಪೂರ್ಣಗೊಂಡಿದೆ. ಡಿಸೆಂಬರ್ ಒಳಗಾಗಿ ಈ ಎಲ್ಲಾ ಪಾರ್ಕ್‍ಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಬೇಕು. ಇದನ್ನು ಹೊರತುಪಡಿಸಿ ಪ್ರತಿ ವಾರ್ಡ್‍ನಲ್ಲಿ ಉದ್ಯಾನ ಅಭಿವೃದ್ಧಿಗೆ ಸ್ಥಳ ಗುರುತಿಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಅವರು ತಿಳಿಸಿದರು.
ಬೊಮ್ಮನಹಳ್ಳಿ, ಮಲಗೊಪ್ಪ ಸೇರಿದಂತೆ ಕೆಲವು ಭಾಗಗಳಲ್ಲಿ ಈಗಲೂ ಕುಡಿಯುವ ನೀರಿಗೆ ತೊಂದರೆಯಿದೆ. ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ನಿರ್ಮಾಣ ಪೂರ್ಣಗೊಂಡಿರುವ ನೀರಿನ ಟ್ಯಾಂಕ್ಗಳನ್ನು ಆದಷ್ಟು ಬೇಗನೆ ಕಾರ್ಯಾರಂಭ ಮಾಡಬೇಕು. ಮುಂದಿನ ಮೂರು ತಿಂಗಳ ಒಳಗಾಗಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಅವರು ತಾಕೀತು ಮಾಡಿದರು.