ಶಿವಮೊಗ್ಗ: ಜಿಲ್ಲಾ ಸರ್ಕಾರಿ ನೌಕರರ ಎರಡು ದಿನದ ಕ್ರೀಡಾಕೂಟಕ್ಕೆ ಗ್ರಾಮೀಣಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಸಚಿವ ಈಶ್ವರಪ್ಪ ಬಲೂನ್ ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ವೇಳೆ, ಸಂಸದ ಬಿ.ವೈ.ರಾಘವೇಂದ್ರ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ನಂತರ ವೇದಿಕೆಯ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕ್ರೀಡೆ ಪ್ರತಿಯೊಬ್ಬನ ಮನಸ್ಸು ಪ್ರಪುಲ್ಲಗೊಳಿಸುತ್ತದೆ. ಕೇವಲ ಹಣ ಮಾಡುವುರ ಬಗ್ಗೆ ಸರ್ಕಾರಿ ನೌಕರರ ಗಮನ ನೀಡದೆ, ತಮ್ಮ ಆರೋಗ್ಯದ ಬಗ್ಗೆಯು ಸಹ ಗಮನ ಹರಿಸಬೇಕೆಂದು ಎಂದು ಸಲಹೆ ನೀಡಿದರು.
ಷಡಾಕ್ಷರಿ ಆಟ ಆಡುವುದೇ ಬೇರೆ ಇದೆ:
ಸಚಿವರು ತಮ್ಮ ಭಾಷಣದ ವೇಳೆ ನಿಮ್ಮ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಆಟ ಆಡುವುದೇ ಬೇರೆ ಎಂದರು. ಈ ವೇಳೆ ಎಲ್ಲರೂ ಜೋರಾಗಿ ನಕ್ಕರು. ಅದಕ್ಕೆ ಸಚಿವರು ನಾನೇನು ಅಂತಹ ಆಟ ಅಂತ ಹೇಳಿಲ್ಲ. ಅವರು ರಾಜ್ಯದ ಎಲ್ಲ ಸರ್ಕಾರಿ ನೌಕರರನ್ನು ಆಟ ಆಡಿಸುತ್ತಾರೆ. ಹಾಗೆಯೇ ಅಧಿಕಾರಿಗಳನ್ನು ಹಾಗೂ ಸಚಿವರನ್ನು ಆಟ ಆಡಿಸುತ್ತಾರೆ ಎಂದರು.
ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರ ಕ್ರೀಡಾಕೂಟದ ರಿಜಿಸ್ಟ್ರೆಷನ್ ಅನ್ನು ಆನ್ ಲೈನ್ ನಲ್ಲಿ ಮಾಡಲಾಗಿದೆ. ಇದು ಹೀಗೆ ಮುಂದುವರೆಯುತ್ತದೆ ಎಂದರು.