ಶಿವಮೊಗ್ಗ: ವಲಸೆ ಕಾರ್ಮಿಕರು ಕೊರೊನಾ ಮಹಾಮಾರಿಗಿಂತಲೂ ಲಾಕ್ಡೌನ್ನಿಂದ ಕಂಗೆಟ್ಟಿದ್ದಾರೆ. ತಮ್ಮೂರಿನಲ್ಲಿ ಕೆಲಸ ಇಲ್ಲದ ಕಾರಣ ವಲಸೆ ಬಂದು ಕೆಲಸ ಮಾಡುತ್ತಿದ್ದವರಿಗೆ ಲಾಕ್ಡೌನ್ನಿಂದಾಗಿ ಕೆಲಸವೇ ಇಲ್ಲದಂತೆ ಆಗಿದೆ. ಇದರಿಂದ ಒಂದೂತ್ತಿನ ಊಟಕ್ಕೂ ಪರದಾಡುವಂತೆ ಆಗಿದೆ. ಹೀಗಾಗಿ ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ.
ಆದರೆ ಯಾರೇ ಎಲ್ಲಿಗೆ ಹೋಗಬೇಕಾದ್ರೂ ಸೇವಾ ಸಿಂಧು ಆ್ಯಪ್ನಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಅಲ್ಲಿ ಅಮೋದನೆ ಸಿಕ್ಕ ಮೇಲೆ ಹೊರಡಬೇಕಿದೆ. ಆದರೆ ಶಿವಮೊಗ್ಗದ ಜಿಲ್ಲೆಯ ಭದ್ರಾವತಿಗೆ ಆಗಮಿಸಿದ್ದ ತೆಲಂಗಾಣದ ವಲಸೆ ಕಾರ್ಮಿಕರು ವಾಪಸ್ ತೆರಳಲು ಸಿದ್ಧವಿದ್ದರೂ ಸಹ ಅವರಿಗೆ ರಾಜ್ಯ ಬಿಟ್ಟು ಹೋಗಲು ಅನುಮತಿ ಇಲ್ಲದಂತೆ ಆಗಿದೆ.
ತೆಲಂಗಾಣದಿಂದ ರಾಯಚೂರು ಗುತ್ತಿಗೆದಾರರ ನೆರವಿನಿಂದ ಭದ್ರಾವತಿಯ ಯುಜಿಡಿ ಕಾಮಗಾರಿಗಾಗಿ 30ಕ್ಕೂ ಹೆಚ್ಚು ಕಾರ್ಮಿಕರು ಆಗಮಿಸಿದ್ದರು. ಲಾಕ್ಡೌನ್ಗಿಂತ ಮೂರು ತಿಂಗಳು ಮೊದಲು ಬಂದಿದ್ದ ಇವರಿಗೆ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದಂತೆ ಆಗಿದೆ. ಇದರಿಂದ ಒಂದು ಹೂತ್ತಿನ ಊಟ ಮಾಡಲು ಸಹ ಆಗದ ಪರಿಸ್ಥಿತಿ ಬಂದಿದೆ. ಇವರನ್ನು ಕರೆ ತಂದಿದ್ದ ಗುತ್ತಿಗೆದಾರ ಸಂಬಂಧಿಕರ ಮದುವೆಗೆ ಹೋಗಿದ್ದು, ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ತಾಲೂಕು ಆಡಳಿತ ನೀಡಿದ ದಿನಸಿ ಕಿಟ್ನಿಂದ ಇಷ್ಟು ದಿನ ಊಟ ಮಾಡಿಕೊಂಡಿದ್ದ ಇವರು, ಈಗ ದಿನಕ್ಕೆ ಕೇವಲ ಒಂದು ಹೊತ್ತಿನ ಊಟ ಮಾಡಿ ಬದುಕುತ್ತಿದ್ದಾರೆ. ತಮ್ಮನ್ನು ತಲಂಗಾಣಕ್ಕೆ ವಾಪಸ್ ಕಳುಹಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಮೇ 7ರಂದು ಸೇವಾ ಸಿಂಧು ಆ್ಯಪ್ನಲ್ಲಿ ಅರ್ಜಿ ಹಾಕಿದ್ದ ಇವರಿಗೆ ಇನ್ನೂ ಹೊರಡಲು ಅನುಮತಿ ಸಿಕ್ಕಿಲ್ಲ. ತಾವು ತಮ್ಮ ಹಣದಲ್ಲೇ ವಾಹನ ಮಾಡಿಕೊಂಡು ಹೋಗಲು ಸಿದ್ಧವಾಗಿದ್ದು, ತಮಗೆ ಹೊರಡುವ ಪಾಸ್ ನೀಡಿದ್ರೆ ಅಷ್ಟೇ ಸಾಕು ಎನ್ನುತ್ತಿದ್ದಾರೆ.