ಶಿವಮೊಗ್ಗ: ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಮಾಡಿದ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾರ್ಚ್ 5 ರಂದು ಸಿಎಂ ಬಿಎಸ್ವೈ ಬಜೆಟ್ ಮಂಡಿಸಲಿದ್ದಾರೆ. ಆರು ತಿಂಗಳ ಹಿಂದೆ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ್ದರು. ಅದಕ್ಕೆ ಪೂರಕವಾಗಿ ಸಿಎಂ ಯಡಿಯೂರಪ್ಪ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದು, ಎಲ್ಲರೂ ರೈತರ ಪರವಾದ ಬಜೆಟ್ ನಿರೀಕ್ಷೆ ಮಾಡುತ್ತಿದ್ದಾರೆ ಎಂದರು.
ಇನ್ನೂ ಮಧ್ಯಮ ವರ್ಗದ ಮಕ್ಕಳ ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ನೀಡಲಾಗುತ್ತಿದೆ. ಮಧ್ಯಮ ವರ್ಗದವರಿಗೆ ಅದು ಹೊರೆಯಾಗುತ್ತಿದ್ದು, ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು. ಒಂದು ವೇಳೆ ಸಾಲಮನ್ನಾ ಮಾಡಲು ಸಾಧ್ಯವಿಲ್ಲದಿದ್ದರೆ ಬಡ್ಡಿಯನ್ನಾದರೂ ಮನ್ನಾ ಮಾಡಲು ಸಿಎಂ ಬಳಿ ಕೋರಿದ್ದೇನೆ. ಇನ್ಮುಂದೆ ಬಡ್ಡಿರಹಿತ ಶೈಕ್ಷಣಿಕ ಸಾಲ ನೀಡಲು ಮನವಿ ಮಾಡಿದ್ದು, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.