ಶಿವಮೊಗ್ಗ : ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಬ್ರವರಿ 3 ರಂದು ಬೆಂಗಳೂರಿನಲ್ಲಿ ಅನಿರ್ದಿಷ್ಟ ಕಾಲಾವಧಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ತಿಳಿಸಿದೆ.
ಈ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಮ್ಮ ಮಾತನಾಡಿ, ಬಿಸಿಯೂಟ ಯೋಜನೆಯ ಖಾಸಗೀಕರಣ ವಿರೋಧಿಸಿ ಹಾಗೂ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ ಇದಕ್ಕೆ ರಾಜ್ಯ ಸರ್ಕಾರ 17 ಸಾವಿರ ಗೌರವ ಧನ ನೀಡುತ್ತದೆ. ಆದರೆ, ಕೇಂದ್ರ ಸರ್ಕಾರ ಯಾವುದೇ ಗೌರವಧನ ನೀಡುತ್ತಿಲ್ಲ ಎಂದು ದೂರಿದರು.
ಬಿಸಿಯೂಟ ನೌಕರರಿಗೆ ಎಲ್ಐಸಿ ಆಧಾರಿತ ನಿವೃತ್ತ ವೇತನ ಸೌಲಭ್ಯ ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ ನೇರವಾಗಿ ಶಿಕ್ಷಣ ಇಲಾಖೆ ಅಡಿಯಲ್ಲಿಯೇ ಮೇಲ್ವಿಚಾರಣೆ ಇರಬೇಕು. ಬಿಸಿಯೂಟ ಯೋಜನೆಯನ್ನು 12 ನೇ ತರಗತಿವರೆಗೆ ವಿಸ್ತರಣೆ ಮಾಡಬೇಕು. ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಬೇಕು. ಕೆಲಸಕ್ಕೆ ಹೆಚ್ಚುವರಿ ವೇತನ ನಿಗದಿಪಡಿಸಬೇಕು. ಬಿಸಿಯೂಟ ನೌಕರರಿಗೂ ಬೇಸಿಗೆ ಹಾಗೂ ದಸರಾ ರಜೆ ದಿನದ ಸೌಲಭ್ಯ ನೀಡಬೇಕು. ಹೆರಿಗೆ ರಜೆ, ಹೆರಿಗೆ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಲು ಮುಂದಾಗಬೇಕು. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪ್ರತಿಬಾರಿ ಪ್ರತಿಭಟನೆಗಳನ್ನು ನಡೆಸಿದಾಗ ಖಾಸಗೀಕರಣದ ನೆಪವೊಡ್ಡಿ ಹೆದರಿಸುತ್ತಿದ್ದಾರೆ. ಆದರೆ, ನಮ್ಮ 17 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ಅನಿದಿರ್ಷ್ಠಾವಧಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ವೇಳೆ, ಸಂಘದ ಜಿಲ್ಲಾಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷೆ ಜಯಮ್ಮ, ಜಿಲ್ಲಾ ಕೋಶಾಧಿಕಾರಿ ಚಂದ್ರಮ್ಮ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಅನಂತರಾಮ್ ಉಪಸ್ಥಿತರಿದ್ದರು.