ಶಿವಮೊಗ್ಗ: ಜಿಲ್ಲೆಯ ಹಾರನಹಳ್ಳಿ ಗ್ರಾಮದಲ್ಲಿ ಎರಡು ಕೋಮುಗಳ ಮಧ್ಯೆ ಮಾರಿಕಾಂಬ ದೇವಿಯ ಗದ್ದುಗೆ ಜಾಗದ ವಿಚಾರಕ್ಕೆ ಗುದ್ದಾಟ ನಡೆದಿದ್ದು, ಪರಸ್ಪರ ಕಲ್ಲು ತೂರಾಟ ನಡೆದಿದೆ.
ಗಲಾಟೆ ವೇಳೆ ರಾಮರಾವ್ ಕೋರೆ ಎಂಬುವರ ಮೇಲೆ ಮತ್ತೊಂದು ಗುಂಪಿನವರು ಮಚ್ಚಿನಿಂದ ಹಲ್ಲೆ ಮಾಡಿದ್ದು, ರಾಮರಾವ್ ಕೋರೆ ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಲಾಟೆಯಿಂದಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಎಸ್ಪಿ ಶಾಂತರಾಜು, ಎಎಸ್ಪಿ ಶೇಖರ್, ಶಾಸಕ ಅಶೋಕ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾರಿ ಗದ್ದುಗೆ ಜಾಗ ನಮ್ಮದು ನಮ್ಮದು ಎಂದು ಎರಡು ಕೋಮಿನ ಮಧ್ಯೆ ಗಲಾಟೆ ಆರಂಭವಾಗಿದೆ. ಕೆಲ ತಿಂಗಳ ಹಿಂದೆ ಮಾರಿ ಕೋಣದ ವಿಷಯಕ್ಕೆ ಸಂಬಂಧಿಸಿದಂತೆಯೂ ಇಲ್ಲಿ ಎರಡು ಊರುಗಳ ನಡುವೆಯೇ ಗಲಾಟೆಯಾಗಿತ್ತು. ಇನ್ನು ಇದೇ ತಿಂಗಳ ಅಂತ್ಯದಲ್ಲಿ ಹಾರನಹಳ್ಳಿ ಮಾರಿಜಾತ್ರೆ ನಡೆಯಲಿದೆ.