ಶಿವಮೊಗ್ಗ: ಮಲೆನಾಡಿನಲ್ಲಿ ಈ ವರ್ಷ ಮಳೆಯ ಕೊರತೆಯಿಂದ ಬರದ ಛಾಯೆ ಆವರಿಸಿದೆ. ಮುಂಗಾರು ಹಂಗಾಮಿನಲ್ಲಿಯೇ ಮಳೆ ಕೊರತೆಯಿಂದ ಭತ್ತ, ಮೆಕ್ಕೆಜೋಳ ಬೆಳೆಹಾನಿಯಾಗಿದೆ. ಎರಡು ದಶಕಗಳ ನಂತರ ಶಿವಮೊಗ್ಗ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಜಿಲ್ಲೆಯಂದು ಘೋಷಿಸಲಾಗಿದೆ. ಹಿಂದೆಲ್ಲಾ ಭದ್ರಾವತಿ ಹೊರತುಪಡಿಸಿ ಉಳಿದ ತಾಲೂಕುಗಳನ್ನು ಬರಗಾಲ ಎಂದು ಘೋಷಿಸಲಾಗಿತ್ತು. ಆದರೆ, ಈ ಬಾರಿ ಸಂಪೂರ್ಣ ಜಿಲ್ಲೆಯೇ ಬರಗಾಲಕ್ಕೆ ತುತ್ತಾಗಿದೆ.
ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಶಿವಮೊಗ್ಗ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿ ಮೆಕ್ಕೆಜೋಳ ರೈತ ಕೈ ಹಿಡಿಯಲಿಲ್ಲ. ಇದರಿಂದ ರೈತರು ಕಂಗಲಾಗಿ ಹೋಗಿದ್ದರು. ನಂತರ ಸರ್ಕಾರ ಬೆಳೆ ನಷ್ಟ ಸಮೀಕ್ಷೆಗೆ ಸೂಚಿಸಿದ ಅನ್ವಯ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಬೆಳೆ ನಷ್ಟ ಸಮೀಕ್ಷೆ ನಡೆಸಿದ ಮೇಲೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾಹಿತಿ: ಬೆಳೆ ಹಾನಿ ಮತ್ತು ಪರಿಹಾರದ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ''ಶಿವಮೊಗ್ಗ ಜಿಲ್ಲಾದ್ಯಾಂತ ಈ ವರ್ಷ ಶೇ 36 ರಷ್ಟು ಮಳೆಯ ಕೊರತೆ ಉಂಟಾಗಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಭೀಕರ ಬರಗಾಲ ಆವರಿಸಿದ್ದು, ಏಳು ತಾಲೂಕುಗಳಲ್ಲಿ ಬರಗಾಲ ಎಂದು ಘೋಷಿಸಲಾಗಿದೆ. ಈಗಾಗಲೇ ನಾವು ಜಂಟಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. 41,530 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಾಗಿದ್ದ ಭತ್ತ ನಾಶವಾಗಿದೆ. 38,240 ಹೆಕ್ಟೇರ್ ಪ್ರದೇಶದಲ್ಲಿನ ಮುಸುಕಿನ ಜೋಳ ಬೆಳೆ ಹಾನಿಯಾಗಿದೆ. ಈ ಬಾರಿ ಒಟ್ಟು 79,770 ಹೆಕ್ಟೇರ್ ಪ್ರದೇಶದಷ್ಟು ಬೆಳೆ ಹಾನಿ ಸಂಭವಿಸಿದೆ. ಈ ಕುರಿತು ಒಟ್ಟು 80.73 ಕೋಟಿ ರೂಪಾಯಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ'' ಎಂದು ತಿಳಿಸಿದರು.
₹6.96 ಕೋಟಿ ರೈತರ ಖಾತೆಗೆ ಜಮಾ: ''41 ಸಾವಿರದಷ್ಟು ರೈತರು ಭತ್ತ ಹಾಗೂ ಮೆಕ್ಕೆಜೋಳಕ್ಕೆ ವಿಮೆ ಮಾಡಿಸಿದ್ದರು. ಕಳೆದ ವರ್ಷಗಳಲ್ಲಿಯೇ ಅತಿ ಹೆಚ್ಚು ಬೆಳೆ ವಿಮೆಯನ್ನು ರೈತರು ಮಾಡಿಸಿಕೊಂಡಿದ್ದಾರೆ. ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿ ತೀವ್ರ ಬರಗಾಲದಿಂದ ರೈತರು ಬೆಳೆ ವಿಮೆ ಮಾಡಿಸಿದ್ದರು. ಮೆಕ್ಕೆಜೋಳಕ್ಕೆ 16,570 ರೈತರು ಬೆಳೆ ವಿಮೆ ಮಾಡಿಸಿದ್ದರು. ಈಗಾಗಲೇ ಬೆಳೆ ಸಮೀಕ್ಷೆ ನಡೆಸಿ, 6.96 ಕೋಟಿ ರೂ. ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ'' ಎಂದು ಮಾಹಿತಿ ನೀಡಿದರು.
''ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿ ಹೆಚ್ಚಿದಾಗಿ ಮೆಕ್ಕೆಜೋಳವನ್ನು ಬೆಳೆಯುತ್ತಾರೆ. ಮೆಕ್ಕೆಜೋಳ ಬೆಳೆ ಹಾನಿಯ ಸಮೀಕ್ಷೆ ನಡೆಸಿ, ವರದಿ ಕೂಡ ಸಲ್ಲಿಸಲಾಗಿತ್ತು. ಬಳಿಕ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ವಿಮಾ ಕಂಪನಿಗಳು ನೀಡಿವೆ'' ಎಂದರು.
ಸರ್ಕಾರದ ವಿರುದ್ಧ ಕಿಡಿ: ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಸ್.ಬಸವರಾಜಪ್ಪ ಪ್ರತಿಕ್ರಿಯಿಸಿ, ''ಸರ್ಕಾರ ಮಧ್ಯಂತರ ಪರಿಹಾರವನ್ನು ನೀಡುವಲ್ಲಿ ಕಾಲ ನೂಕುತ್ತಿದೆ. ರಾಜ್ಯದಲ್ಲಿ ಈಗಾಗಲೇ 230ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲ ಎಂದು ಘೋಷಿಸಿದೆ. ಆದರೆ, ಪರಿಹಾರ ನೀಡದೇ ಕಾಲ ನೂಕುತ್ತಿದೆ. ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತ್ತ ಬೊಟ್ಟು ತೋರುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಮಧ್ಯಂತರ ಪರಿಹಾರವನ್ನು ಘೋಷಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಪರಿಹಾರ ನೀಡದೇ ಸತಾಯಿಸುತ್ತಿದೆ. ರಾಜ್ಯ ಸರ್ಕಾರ ಕೇವಲ ಕೃಷಿ ಬೆಳೆ ಪರಿಹಾರದ ಸಮೀಕ್ಷೆ ನಡೆಸಿದೆ. ಆದರೆ, ತೋಟಗಾರಿಕ ಬೆಳೆ ಹಾನಿ ಕುರಿತು ಯಾವುದೇ ಘೋಷಣೆ ಮಾಡಿಲ್ಲ'' ಎಂದು ಆರೋಪಿಸಿದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ₹300 ಕೋಟಿ ವೆಚ್ಚದಲ್ಲಿ ಶಾಸಕರು, ಅಧಿಕಾರಿಗಳ ವಾಸ್ತವ್ಯಕ್ಕೆ ಪಂಚತಾರಾ ಹೊಟೇಲ್ ನಿರ್ಮಾಣಕ್ಕೆ ಚಿಂತನೆ