ಶಿವಮೊಗ್ಗ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ಸೇರಿದಂತೆ ನನೆಗುದಿಗೆ ಬಿದ್ದಿರುವ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಮಾದ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳು, ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಇವುಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಈಗಾಗಲೇ ವಿಮಾನ ಪ್ರಾಧಿಕಾರದ ಜೊತೆ ಚರ್ಚಿಸಲಾಗಿದ್ದು, ಈಗಿರುವ ವಿಮಾನ ನಿಲ್ದಾಣದಲ್ಲಿಯೇ ರನ್‍ವೇ ಬದಲಾಯಿಸಿ ಹೊಸ ಗುತ್ತಿಗೆದಾರನ ನೇಮಕ ಮಾಡಿ ಶೀಘ್ರದಲ್ಲಿಯೇ ವಿಮಾನ ನಿಲ್ದಾಣ ಸ್ಥಾಪನೆಗೆ ಮರು ಜೀವ ನೀಡಲಾಗುವುದು ಎಂದರು. ನಗರದಲ್ಲಿ ರೈಲ್ವೆ ಕೆಳ ಹಾಗೂ ಮೇಲ್ಸೇತುವೆ ನಿರ್ಮಾಣವಾಗಬೇಕಾಗಿದೆ. ಇದಕ್ಕೂ ಕೂಡ ಚಾಲನೆ ನೀಡಲಾಗುವುದು. ಜುಲೈ 7 ರಂದು ಕೇಂದ್ರ ರೈಲ್ವೆ ಸಚಿವರು ನಗರಕ್ಕೆ ಆಗಮಿಸಲಿದ್ದು, ಅವರೊಡನೆ ಚರ್ಚಿಸಿ ರೈಲ್ವೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ವಿಶೇಷವಾಗಿ ಹೊಸ ರೈಲುಗಳ ಸಂಚಾರಕ್ಕೂ ಬೇಡಿಕೆ ಇಡಲಾಗುವುದು ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣವನ್ನ ಸ್ಯಾಟಲೈಟ್ ರೈಲ್ವೆ ಕೇಂದ್ರವನ್ನಾಗಿ ನಿರ್ಮಿಸಲಾಗುವುದು ಎಂದರು.
ಈಗಾಗಲೇ ಕೇಂದ್ರ ಸರ್ಕಾರ ದೇಶದಲ್ಲಿ ಸುಮಾರು 42 ಕೈಗಾರಿಕೆಗಳು ನಷ್ಟದಲ್ಲಿವೆ ಎಂದು ಗುರುತಿಸಿದೆ. ಅದರಲ್ಲಿ ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆ ಒಂದಾಗಿದೆ. ವಿಐಎಸ್‍ಎಲ್ ಉಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು. ಹಾಗೆಯೇ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಕೂಡ ವಿಳಂಬವಾಗದಂತೆ ನಡೆಯಲಿದ್ದು, ಬಿಎಸ್‍ಎನ್‍ಎಲ್ ಉಳಿಸಲು ಈಗಾಗಲೇ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.