ಶಿವಮೊಗ್ಗ: "ಸಂಸದ ಬಿ.ವೈ.ರಾಘವೇಂದ್ರ ಡಬ್ಬಲ್ ಸ್ಟಾಂಡರ್ಡ್ನವರು. ವೇದಿಕೆಯಲ್ಲಿ ಸಿಎಂ, ಸರ್ಕಾರಕ್ಕೆ ಹಾಗೂ ಯುವ ಜನಸ್ತೋಮಕ್ಕೆ ಹೆದರಿ ಹೊಗಳಿ, ನಂತರ ಸರ್ಕಾರದ ಗ್ಯಾರಂಟಿ ಬೋಗಸ್, ಗ್ಯಾರಂಟಿ ನೀಡುತ್ತಿರುವುದು ಸರಿಯಾಗಿ ತಲುಪಿಲ್ಲ ಎಂದಿದ್ದಾರೆ. ಅವರು ಗ್ಯಾರಂಟಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧವಿದ್ದೇನೆ" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.
ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ: "ಅನಂತ್ ಕುಮಾರ್ ಹೆಗಡೆ ಚುನಾವಣೆ ಬಂತೆಂದರೆ ಏನು ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಸಿಎಂಗೆ ಬೈಯಲು ಅವರಿಗೆ ಯೋಗ್ಯತೆ ಇಲ್ಲ. ಐದು ವರ್ಷದಲ್ಲಿ ನಾಲ್ಕು ವರ್ಷ ಕಾಣಿಸದೇ ಇರುವವರು ಚುನಾವಣೆ ಬಂದಾಗ ಮಾತ್ರ ಕಾಣುತ್ತಾರೆ" ಎಂದು ವಾಗ್ದಾಳಿ ನಡೆಸಿದರು.
"ಹೆಗಡೆ ಹೇಳಿಕೆಯನ್ನು ನಾನು ವೈಯಕ್ತಿಯವಾಗಿ ಖಂಡಿಸುತ್ತೇನೆ. ಈಗ ಹೆಗಡೆ ವಿರುದ್ಧ ಸ್ವಮೊಟೊ ಕೇಸ್ ಹಾಕಲಾಗಿದೆ. ಹೆಗಡೆ ಹಾಗೂ ಕಟೀಲ್ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗಬೇಕು. ಈ ಬಾರಿ ಚುನಾವಣೆಯಲ್ಲಿ ಮಲೆನಾಡು, ಕರಾವಳಿ ಭಾಗದಲ್ಲಿ ನಾವು ಗೆಲ್ಲುತ್ತೇವೆ. ನಾವು ರಾಮನ ವಿಚಾರದಲ್ಲಿ ಚುನಾವಣೆಗೆ ಹೋಗಲ್ಲ. ನಾವು ಎಲ್ಲಾ ದೇವರನ್ನು ಕರೆದುಕೊಂಡು ಹೋಗುತ್ತೇವೆ. ಅಭಿವೃದ್ಧಿಯ ವಿಷಯದಲ್ಲಿ ನಾವು ಚುನಾವಣೆ ಗೆಲ್ಲುತ್ತೇವೆ" ಎಂದು ಹೇಳಿದರು.
ಸೇತುವೆ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿ, "ಈಗ ಸರ್ಕಾರ ಬದಲಾಗಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿ ಮಧು ಬಂಗಾರಪ್ಪ ಇದ್ದೇವೆ. ಉದ್ಘಾಟನೆಗೆ ನಮ್ಮ ಅನುಮತಿ ಕೇಳುವುದಿಲ್ಲವೇ?" ಎಂದು ಪ್ರಶ್ನಿಸಿದರು. "ಅವರೇ ಹೋಗಿ ಕಾಮಗಾರಿ ಪರಿಶೀಲನೆ ನಡೆಸುತ್ತಿರುವುದು ಸರಿಯಲ್ಲ. ಅವರು ಮುಂದೆ ನೋಡಿಕೊಂಡು ಹೋಗುವುದೇ ಉತ್ತಮ" ಎಂದರು.
"ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ, ನಮ್ಮೆಲ್ಲರ ತೆರಿಗೆ ಹಣವನ್ನು ಪೋಲು ಮಾಡಿ ಕಟ್ಟಲಾಗಿದೆ. ಈ ಕುರಿತು ನಾನು ಸಿಎಂಗೆ ಪತ್ರ ಬರೆದಿದ್ದೇನೆ" ಎಂದು ಹೇಳಿದರು.
"ಸುಭದ್ರವಾದ ಸರ್ಕಾರವನ್ನು ಕೆಡಹುವುದರ ಬಗ್ಗೆ ಮಾತನಾಡುವುದು ಸರಿಯಲ್ಲ. ಬಿಜೆಪಿರವರಿಗೆ ಪೂರ್ಣ ಬಹುಮತ ಬಂದಿಲ್ಲ. ಅವರು ನೇರವಾಗಿ ಅಧಿಕಾರಕ್ಕೆ ಬಂದಿಲ್ಲ. ನಮ್ಮ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದವರೇ ಬಿಜೆಪಿ ಕಾರ್ಯಕರ್ತರು. ನಮ್ಮ ಯೋಜನೆಯಡಿ ಅವರು ಸುಖವಾಗಿ ಬದುಕುತ್ತಿದ್ದಾರೆ. ಹಾಲಿ ಸಚಿವರಿಗೆ ಲೋಕಸಭಾ ಟಿಕೆಟ್ ನೀಡುವ ಕುರಿತು ನಮ್ಮ ಪಕ್ಷದಲ್ಲಿ ಚರ್ಚೆ ಆಗಿಲ್ಲ. ಆ ರೀತಿ ಆದರೆ ನಮ್ಮ ಪಕ್ಷದ ತೀರ್ಮಾನಕ್ಕ ಬದ್ಧವಾಗಿರುತ್ತೇವೆ" ಎಂದು ಹೇಳಿದರು.
ಭಾರತ ಯಾತ್ರೆಗೆ ಶುಭವಾಗಲಿ: "ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ರಾಹುಲ್ ಗಾಂಧಿ ಭಾನುವಾರದಿಂದ ಪ್ರಾರಂಭಿಸಿದ್ದಾರೆ. ಯಾತ್ರೆಗೆ ಶುಭಕರವಾಗಲಿ. ಯಾತ್ರೆಯಲ್ಲಿ ನಾವೆಲ್ಲ ಒಂದು ದಿನ ಭಾಗವಹಿಸಲಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆ ಇನ್ನೂ ತಲುಪಿಲ್ಲದರ ಬಗ್ಗೆ ಆರೋಪ ಕೇಳಿ ಬಂದಿತ್ತು. ಇದರಿಂದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಗೆ ಮುಂದಿನ ವರ್ಷ 10 ಲಕ್ಷ ಫಲಾನುಭವಿಗಳಾಗುತ್ತಾರೆ" ಎಂದರು.
ಹಳೇ ಜೈಲು ಆವರಣಕ್ಕೆ ಅಲ್ಲಮ ಪ್ರಭು ಹೆಸರನ್ನು ನಾಮಕಾರಣ ಮಾಡಬೇಕೆಂಬ ಮನವಿಗೆ ಸಿಎಂ ಸ್ಪಂದಿಸಿ ಅದೇ ಹೆಸರನ್ನು ಶಿವಮೊಗ್ಗದಲ್ಲಿ ಘೋಷಿಸಿದ್ದಾರೆ. ಇದು ನನಗೆ ಖುಷಿ ತಂದಿದೆ. ಬಸವಣ್ಣ ಹಾಗೂ ಅಲ್ಲಮಪ್ರಭು ಅನುಯಾಯಿಗಳ ಪರವಾಗಿ ಸಿಎಂ ಅವರಿಗೆ ಅಭಿನಂದನೆಗಳು. ಅಲ್ಲಮಪ್ರಭು ಹೆಸರನ್ನು ಸರ್ಕಾರ ಆದೇಶ ಮಾಡಬೇಕಿದೆ. ಇದಕ್ಕಾಗಿ ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ" ಎಂದು ತಿಳಿಸಿದರು.
ಅಲ್ಲಮಪ್ರಭು ಕ್ಷೇತ್ರ ಅಭಿವೃದ್ಧಿ: "ಅಲ್ಲಮಪ್ರಭು ಜನ್ಮಸ್ಥಳ ಬಳ್ಳಿಗಾವಿಗೆ ಹೋಗಿದ್ದೆ. ಅಲ್ಲಮಪ್ರಭು ಸಮಾಧಿ ಸ್ಥಳಕ್ಕೆ ಹೋಗಿ ಬಂದಿದ್ದೇನೆ. ಆದರೆ ಅಲ್ಲಮಪ್ರಭು ಜನ್ಮಸ್ಥಳ ಯಾಕೆ ಅಭಿವೃದ್ಧಿ ಮಾಡಿಲ್ಲ ಅಂತ ಶಿಕಾರಿಪುರವನ್ನು ಆಳಿದವರು ಹೇಳಬೇಕು. ಮಠ ಸಹ ಯಾವುದೇ ಅಭಿವೃದ್ಧಿ ಆಗಿಲ್ಲ. ಅವುಗಳ ಅಭಿವೃದ್ಧಿಗೆ ನಾನು ಪ್ರಯತ್ನ ಮಾಡುತ್ತೇನೆ. ಅಲ್ಲಮಪ್ರಭುವಿನಲ್ಲಿ ಅಲ್ಲ, ಅಮ್ಮ, ಪ್ರಭುವನ್ನು ಕಾಣಬಹುದಾಗಿದೆ. ಇದು ನನ್ನ ವೈಯಕ್ತಿಕ ಚಿಂತನೆ" ಎಂದರು.
ಇದನ್ನೂ ಓದಿ: ಅಮಿತ್ ಶಾ ಜೊತೆ ಮಾತುಕತೆ ಫಲಪ್ರದ, ಎಲ್ಲಾ ಸಮಸ್ಯೆಗಳು ಸುಖಾಂತ್ಯ: ವಿ.ಸೋಮಣ್ಣ