ಶಿವಮೊಗ್ಗ: ರಾಹುಲ್ ಗಾಂಧಿ ಪರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ ಎನಿಸುತ್ತದೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾನೂನು ರೀತಿ ಬಂದಿರುವ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಈ ವಿಚಾರದಲ್ಲಿ ರಾಹುಲ್ ಗಾಂಧಿ ಧೈರ್ಯ ಮೆಚ್ಚಲೇಬೇಕು. ದೇಶವನ್ನು ಸುತ್ತುವುದರ ಜೊತೆಗೆ ಈ ರೀತಿಯ ಪರೀಕ್ಷೆಯನ್ನು ಅನುಭವಿಸಿ ಜಯ ಗಳಿಸಿದ್ದಾರೆ ಎಂದರು.
ವಿಐಎಸ್ ಎಲ್ ಕಾರ್ಖಾನೆ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಬಂದ್ ಮಾಡುತ್ತೇವೆ ಎಂದು ಎಲ್ಲೂ ಹೇಳಿರಲಿಲ್ಲ. ಇಲ್ಲಿನ ಜನಪ್ರತಿನಿಧಿಗಳು, ಸಂಸದರು ಮಧ್ಯ ಮಧ್ಯ ಬಂದು ಬೇರೆ ಬೇರೆ ಹೇಳಿಕೆ ಕೊಟ್ಟರು. ಇನ್ನೊಂದು 7 ತಿಂಗಳಿಗೆ ಲೋಕಸಭೆ ಚುನಾವಣೆ ಬರಲಿದೆ. ವಿಐಎಎಸ್ಎಲ್ಗೆ ತಾತ್ಕಾಲಿಕವಾಗಿ ಚಾಲನೆ ಕೊಟ್ಟಿದ್ದಾರೆ. ಪೂರ್ಣವಾಗಿ ಚಾಲನೆ ಕೊಟ್ಟರೆ ಒಳ್ಳೆಯದು ಎಂದರು. ಕಾರ್ಖಾನೆ ಮುಚ್ಚದೇ ಮುಂದುವರಿಸಿದರೆ ಒಳ್ಳೆಯದು.
ಮುಂದುವರೆದು, ವಿಐಎಸ್ ಎಲ್ ಎಂಪಿಎಂ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಕಿರೀಟ. ಕಾರ್ಖಾನೆ ನಡೆಸಲು ಹೊರೆ ಇರುತ್ತದೆ. ಅದನ್ನು ಉಳಿಸುವುದು ಕೇಂದ್ರ ಸರಕಾರದ ಕೈಯಲ್ಲಿರುತ್ತದೆ. ಯಾರು ಯಾರು ಬಿಟ್ಟು ಹೋಗಿದ್ದಾರೆ. ಅವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ಆರಗ ಜ್ಞಾನೇಂದ್ರ ಖರ್ಗೆ ವಿರುದ್ಧ ಹೇಳಿಕೆ ವಿಚಾರ: ಆರಗ ಜ್ಞಾನೇಂದ್ರ ಅವರ ಯೋಗ್ಯತೆ ಏನು ಅಂತಾ ತೋರಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ. ನಾವು ರಾಜಕಾರಣಿಗಳು ಎಲ್ಲರಿಗೂ ಮಾದರಿಯಾಗಿರಬೇಕು. ಮೊದಲು ಖರ್ಗೆ ಅಂದರು, ಆಮೇಲೆ ಇಲ್ಲ ಅಂದರು. ಯಾರೇ ಆಗಲಿ ವ್ಯಕ್ತಿಗತ ನಿಂದನೆ ಒಳ್ಳೆಯದಲ್ಲ, ಅದು ನಿಲ್ಲಬೇಕು. ಅಭಿವೃದ್ಧಿ, ಕಾರ್ಯಕ್ರಮ ಕುರಿತು ಮಾತನಾಡಬೇಕು ಎಂದರು.
ವರ್ಗಾವಣೆ ದಂಧೆ ಹೆಚ್.ಡಿ.ಕುಮಾರ ಸ್ವಾಮಿ ಆರೋಪ: ವರ್ಗಾವಣೆ ಕುರಿತು ಮಾತನಾಡುವ ಕುಮಾರಸ್ವಾಮಿ ಅವರು ಈ ಕೆಲಸವನ್ನು ಎಷ್ಟು ಸಲ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಅವರು ಪೆನ್ ಡ್ರೈವ್ ಇಟ್ಟುಕೊಂಡು ಬಂದರೂ ಏನು ಆಗಲಿಲ್ಲ. ಆ ರೀತಿ ದೂರು ಇದ್ದರೆ ನನಗೆ ತಿಳಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ ಎಂದರು. ಇವರು ರಾಜ್ಯವನ್ನು ಆಳಿದವರು ಈ ರೀತಿ ತಪ್ಪು ಮಾಹಿತಿ ಕೊಟ್ಟರೆ, ರಾಜ್ಯದ ಬಗ್ಗೆ ತಪ್ಪು ಮಾಹಿತಿ ಹೋಗುತ್ತದೆ. ಈ ರೀತಿ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Modi Surname case: ಸತ್ಯಕ್ಕೆ ಯಾವತ್ತಿದ್ರೂ ಜಯ- ರಾಹುಲ್ ಗಾಂಧಿ; 'ಇಂಡಿಯಾ' ಮೈತ್ರಿ ಸಂಕಲ್ಪಕ್ಕೆ ಬಲ- ಮಮತಾ