ಶಿವಮೊಗ್ಗ: ಜೆಡಿಎಸ್ ಸಚಿವರು ಹಾಗೂ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿರುವುದನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಖಂಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಐಟಿ ದಾಳಿ ನಡೆಸಬೇಕು. ಆದರೆ ಅದಕ್ಕೂ ಸಮಯ ಸಂದರ್ಭ ಇರುತ್ತದೆ. ಇಂತಹ ಸಂದರ್ಭದಲ್ಲಿ ದಾಳಿ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿ ಸಿಬಿಐ ಬಳಸಿಕೊಂಡು, ಆ ಸಂಸ್ಥೆಯ ಮಾನ ಮರ್ಯಾದೆ ತೆಗೆದಿತ್ತು. ಅದೇ ರೀತಿ ಇಡಿ ಬಳಸಿಕೊಂಡು ಸಚಿವ ಡಿ.ಕೆ. ಶಿವಕುಮಾರ್ ಮೇಲೂ ದಾಳಿ ನಡೆಸಿದ್ದರು ಎಂದು ಆರೋಪಿಸಿದರು.
ಸಿಬಿಐ, ಇಡಿ ಹಾಗೂ ಐಟಿ ಯಂತಹ ಇಲಾಖೆಗಳನ್ನು ಸ್ವಂತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ಆದರೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್- ಕಾಂಗ್ರೆಸ್ನವರ ಮೇಲೆಯೇ ದಾಳಿ ನಡೆಸಿದ್ದು ಖಂಡನೀಯ ಎಂದರು.
ಐಟಿಯವರು ದಾಳಿಯನ್ನು ಈಗ ಮಾಡುವುದಲ್ಲ, ಬದಲಾಗಿ ಆಪರೇಷನ್ ಕಮಲ ಮಾಡಲು ಮುಂಬೈನಲ್ಲಿ ಹಣ ಇಟ್ಟುಕೊಂಡು ಕುಳಿತಿದ್ರಲ್ಲಾ ಆಗ ಮಾಡಬೇಕಿತ್ತು. ಈ ಕುರಿತು ಸಿಎಂ ಹಾಗೂ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ದಾಳಿಯ ವಿಚಾರ ಸಿಎಂಗೆ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ತಿಳಿದಿರಬಹುದು ಎಂದು ಮಧು ಬಂಗಾರಪ್ಪ ಹೇಳಿದರು.