ಶಿವಮೊಗ್ಗ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಮಾಡಿರುವುದರಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ಬಿಜೆಪಿಯವರು ಭಾವನಾತ್ಮಕವಾಗಿ ಮತ ಬರುತ್ತದೆ ಎಂದುಕೊಂಡಿದ್ದಾರೆ. ಅವರಂತಹ ದೊಡ್ಡ ದಡ್ಡರು ಯಾರು ಇಲ್ಲ ಎಂದು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಭಜರಂಗದಳ ನಿಷೇಧದಿಂದ ನಮ್ಮ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ. ಆಂಜನೇಯ ನಮ್ಮ ಮನೆಯ ದೇವರು. ಬಿಜೆಪಿಯವರು ಭಾವನಾತ್ಮಕವಾಗಿ ಜನರ ಮೇಲೆ ಪ್ರಭಾವ ಬೀರಲು ಹೋಗುತ್ತಿದ್ದಾರೆ. ಆರ್ ಎಸ್ ಎಸ್, ಭಜರಂಗದಳ ಸಂವಿಧಾನದ ಅಡಿಯಲ್ಲಿ ಬಂದ್ರೆ ಎಲ್ಲರೂ ಒಪ್ಪಿಕೊಳ್ಳೋಣ. ಅದು ದೇಶದ ಕಾನೂನಿಗೆ ವಿರುದ್ಧವಾಗಿದ್ದು, ಅವರಿಗೆ ಶಿಕ್ಷೆ ಆಗುತ್ತದೆ. ಬಿಜೆಪಿಯವರು ಎಷ್ಟೇ ತಿಪ್ಪಾರಲಾಗ ಹಾಕಿದ್ರು ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ" ಎಂದರು.
"ಜನ ಒಳ್ಳೆಯದಕ್ಕೆ ಬೆಲೆ ಕೊಡುತ್ತಾರೆ. ಭಜರಂಗದಳ ಕಾನೂನು ವಿರುದ್ಧ ಇದ್ರೆ ಅವರನ್ನು ನಿಷೇಧ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಅಷ್ಟೇ. ಪ್ರಣಾಳಿಕೆಯ ಉಪಾಧ್ಯಕ್ಷರಾಗಿ ನಾನು ನಮ್ಮ ಪಕ್ಷಕ್ಕೆ ಬದ್ಧನಾಗಿದ್ದೇನೆ. ಈಗ ಭಜರಂಗದಳ ಹಾಗೂ ಪಿಎಫ್ಐ ಅವರ ಮೇಲೆ ಹೆಚ್ಚು ಕೇಸ್ ಇರುವ ಕಾರಣ ಉದಾಹರಣೆ ಸಮೇತ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ನಿಷೇಧ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಈ ಕುರಿತು ಚರ್ಚೆ ನಡೆಸಿದ್ದು, ನಮಗೆ ಸಂತೋಷವಾಗಿದೆ. ಉಚಿತ ಕೊಡುಗೆಗಳನ್ನು ಜನತೆಗೆ ನೀಡಲು ಶೇ. 40 ಕಮಿಷನ್ ಅನ್ನು ಬಿಜೆಪಿರವರು ಪಡೆಯುತ್ತಿದ್ದದ್ದನ್ನು ನಾವು ಬಳಸಿಕೊಂಡ್ರೆ ಸಾಕು" ಎಂದು ಹೇಳಿದರು.
ಈಶ್ವರಪ್ಪನವರಿಗೆ ಸುಡುವುದು ಬಿಟ್ಟರೆ ಬೇರೆ ಗೂತ್ತಿಲ್ಲ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿರವರಿಗೆ ಸುಟ್ಟು ಹಾಕುವುದು ಬಿಟ್ಟರೆ ಏನೂ ಗೂತ್ತಿಲ್ಲ. ಅವರಿಗೆ ಚಳಿ ಇರಬೇಕು ಇದಕ್ಕೆ ಸುಟ್ಟಿದ್ದಾರೆ ಎಂದು ಗೇಲಿ ಮಾಡಿದರು.
ಇದನ್ನೂ ಓದಿ : ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟ ಈಶ್ವರಪ್ಪ: ಕೆಎಸ್ಇ ಮಾಡಿದ್ದು ಸರಿಯಲ್ಲ ಎಂದು ಖರ್ಗೆ ಗರಂ
ಸೊರಬದಲ್ಲಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಹೇಳುವುದನ್ನು ಸೊರಬದಲ್ಲಿ ಹೇಳಿದ್ದಾರೆ ಅಷ್ಟೇ . ಸೊರಬ ಕ್ಷೇತ್ರ ಕುಮಾರಸ್ವಾಮಿ ಹೇಳಿದಂತೆ ಇಲ್ಲ. ಈಗ ಹಣ ಗೆಲ್ಲಲ್ಲ, ಜನ ಗೆಲ್ಲುತ್ತಾರೆ. ಹಿಂದೆ ನಾನು ಜೆಡಿಎಸ್ನಲ್ಲಿದ್ದಾಗ ಎ ಟಿಮ್ ಬಿ ಟಿಮ್ ಅಂತ ಬಂತು. ಯಡಿಯೂರಪ್ಪನವರ ಮುಖ ನೋಡಿ ಮತ ಹಾಕಿದ್ರು. ಆದರೆ, ಈ ಬಾರಿ ಆ ರೀತಿ ಆಗಲ್ಲ, ನಾನು ಗೆದ್ದೇ ಗೆಲ್ಲುತ್ತೇನೆ" ಎಂದರು.
ಪ್ರಣಾಳಿಕೆ ಅಳೆದು ತೂಗಿ ತಯಾರು ಮಾಡಲಾಗಿದೆ: "ಪ್ರಣಾಳಿಕೆ ತಯಾರಿ ಬಗ್ಗೆ ಸಾಕಷ್ಟು ತಯಾರಿ ನಡೆಸಿಯೇ ಹೊರ ತರಲಾಗಿದೆ. ಪ್ರಣಾಳಿಕೆಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೂ ಒತ್ತು ನೀಡಲಾಗಿದೆ. ನಮ್ಮ ಐದು ಅಂಶದ ಪ್ರಣಾಳಿಕೆ ಜನರ ಮನಸ್ಸು ಗೆದ್ದಿದೆ. ಜನರ ಜೀವನ ಗುಣಮಟ್ಟ ಕೆಳಮಟ್ಟಕ್ಕೆ ಹೋಗಿದ್ದನ್ನು ಮೇಲೆತ್ತಲು ಹಣ ನೀಡುವುದು ಸರ್ಕಾರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಿಗೆ ಗೌರವ ಭತ್ಯೆ ನೀಡಲಾಗುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ ನಮ್ಮ ಬಜೆಟ್ನಲ್ಲಿ ತೋರಿಸಲಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಿದೆ. ರಾಜ್ಯದಲ್ಲಿ ಉಂಟಾಗಿರುವ ಕಲ್ಮಶವನ್ನು ಸರಿ ಮಾಡಲು ಪ್ರಣಾಳಿಕೆ ತಯಾರು ಮಾಡಲಾಗಿದೆ. ಐದು ವರ್ಷ ನಮ್ಮ ಸರ್ಕಾರ ಇರುವವರೆಗೂ ಮಹಿಳೆಯರಿಗೆ ಬಸ್ ಪ್ರಯಾಣ ದರ ಉಚಿತವಾಗಿದೆ. ನಮ್ಮ ರಾಜ್ಯದಿಂದ ಪಕ್ಕದ ರಾಜ್ಯಕ್ಕೆ ವಿದ್ಯುತ್ ಮಾರಾಟ ಮಾಡುವುದು ಸರಿಯಲ್ಲ" ಎಂದರು.