ಶಿವಮೊಗ್ಗ: ಅಧಿಕಾರಿಗಳು ಕೋರ್ಟ್ ಆದೇಶದ ಮೂಲಕ ಬೆದರಿಸಿ ಅರಣ್ಯ ಜಮೀನು ತೆರವು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ದೂರಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರು ಅರಣ್ಯವಾಸಿಗಳಿಗೆ ಇತಿಶ್ರೀ ಹಾಡಿದ್ದಾರೆ. 11 ವರ್ಷಗಳ ನಂತರ ತಾಳಗೊಪ್ಪ, ಸೊರಬದಿಂದಲೇ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
30 ವರ್ಷಗಳಿಂದ ಇರುವ ಜಮೀನನ್ನು ಏಕೆ ತೆರವು ಮಾಡಬೇಕು ಎಂದು ರೈತರು ಪ್ರಶ್ನಿಸುತ್ತಾರೆ. ಪೊಲೀಸರನ್ನು ಕರೆಸಿ ಅರಣ್ಯವಾಸಿಗಳ ದಿಕ್ಕು ತಪ್ಪಿಸಿ ಜಾಗ ಖಾಲಿ ಮಾಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅರಣ್ಯವಾಸಿಗಳ ತೋಟ, ಗದ್ದೆ ನಾಶವಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಾಗರ ತಾಲೂಕು ತಾಳಗುಪ್ಪ ಭಾಗದಲ್ಲಿ ರೈತರ ಭೂಮಿಯನ್ನು ಸ್ವಾರ್ಥದಿಂದ ಖಾಲಿ ಮಾಡಿಸಲಾಗುತ್ತಿದೆ. ಅಧಿಕಾರದಲ್ಲಿರುವ ಬಿಜೆಪಿಯವರು ಕಾನೂನು ಬದಲಾವಣೆ ಮಾಡಿ ಅರಣ್ಯವಾಸಿಗಳ ಹಿತ ಕಾಪಾಡಬಹುದಿತ್ತು. ಅರಣ್ಯ ಬಗರ್ ಹುಕುಂ ಮಾಡಿದವರಿಗೆ ಕಾನೂನು ಬದಲಿಸಿ ಹಕ್ಕುಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು. ಶರಾವತಿ ಮುಳುಗಡೆ ಸಂತಸ್ತರನ್ನು ಒಕ್ಕಲೆಬ್ಬಿಸಲಾಗುತ್ತಿದೆ, ಇದು ಅಪರಾಧ. ನಾಡಿಗೆ ಬೆಳಕು ನೀಡಲು ತಮ್ಮ ಮನೆ, ಭೂಮಿ ಬಿಟ್ಟು ಕೊಟ್ಟವರಿಗೆ ಭೂಮಿಯ ಹಕ್ಕುಪತ್ರ ನೀಡದೇ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು. ಇದೇ ವೇಳೆ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಏಕೆ ಹಕ್ಕು ಪತ್ರ ನೀಡಿಲ್ಲ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಇದನ್ನೂ ಓದಿ: ನನ್ನ ಸ್ಪರ್ಧೆ ಅಣ್ಣನ ವಿರುದ್ಧ ಅಲ್ಲ, ಒಂದು ಪಕ್ಷದ ಅಭ್ಯರ್ಥಿ ವಿರುದ್ದ: ಮಧು ಬಂಗಾರಪ್ಪ
ಸ್ಪರ್ಧೆ ಅಣ್ಣನ ವಿರುದ್ಧ ಅಲ್ಲ, ಪಕ್ಷದ ಅಭ್ಯರ್ಥಿ ವಿರುದ್ಧ: ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಅಣ್ಣನ ವಿರುದ್ದ ಅಲ್ಲ, ಒಂದು ಪಕ್ಷದ ಅಭ್ಯರ್ಥಿಯ ವಿರುದ್ದ ಎಂದು ಮಧು ಬಂಗಾರಪ್ಪ ಕೆಲ ದಿನಗಳ ಹಿಂದೆ ಹೇಳಿದ್ದರು. ನಾನು ಅಣ್ಣನ ವಿರುದ್ಧ ಸ್ಪರ್ಧಿಸುವುದು ಸತ್ಯ. ಆದರೆ ಅಣ್ಣನ ವಿರುದ್ಧ ನಿಲ್ಲುತ್ತಿಲ್ಲ. ಒಬ್ಬ ವ್ಯಕ್ತಿಯ ವಿರುದ್ಧ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ವ್ಯಕ್ತಿಯ ವಿರುದ್ಧ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸರ್ಕಾರವು ರಾಜ್ಯದ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ: ಮಧು ಬಂಗಾರಪ್ಪ ವ್ಯಂಗ್ಯ