ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ಮಹಿಳೆಯೋರ್ವರು ಕೋವಿಡ್ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಿದರೂ ನಮಗೆ ಸರಿಯಾಗಿ ಮಾಸ್ಕ್ ನೀಡುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳು ತಮಗೆ ಸರಿಯಾದ ಸಮಯಕ್ಕೆ ವೇತನ ಸಿಗುವುದಿಲ್ಲ. ವಾಸಕ್ಕೆ ಸರಿಯಾದ ಮನೆಯಿಲ್ಲ. ಜೀವನ ಭದ್ರತೆ ಇಲ್ಲದೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.
ಈ ಕುರಿತು ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಎಂ. ಶಿವಣ್ಣ ಮಾತನಾಡಿ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮೆಗ್ಗಾನ್ ಆಸ್ಪತ್ರೆ ದೊಡ್ಡ ಆಸ್ಪತ್ರೆಯಾಗಿದ್ದು, ಅಕ್ಕಪಕ್ಕದ 3-4 ಜಿಲ್ಲೆಗಳಿಂದ ಇಲ್ಲಿಗೆ ಚಿಕಿತ್ಸೆ ಪಡೆಯಲು ರೋಗಿಗಳು ಬರುತ್ತಾರೆ. ಆದರೆ, ಪೌರ ಕಾರ್ಮಿಕರ ಸಿಬ್ಬಂದಿ ಸಂಖ್ಯೆ ಕೊರತೆ ಇದೆ. ಸದ್ಯ ಆಸ್ಪತ್ರೆಯಲ್ಲಿ 183 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಆದರೆ, ಕಾರ್ಮಿಕರ ಸಂಖ್ಯೆ ಹೆಚ್ಚು ಮಾಡಬೇಕಿದೆ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಮಿಕರು ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಪ್ರೋತ್ಸಾಹ ಸಹಾಯಧನ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಇದುವರೆಗೂ ಪ್ರೋತ್ಸಾಹ ಧನ ಸಿಕ್ಕಿಲ್ಲ. ಪ್ರೋತ್ಸಾಹ ಧನ ನೀಡುವಂತೆ ಹಾಗು ಮೆಗ್ಗಾನ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಆಯೋಗದ ಅಧ್ಯಕ್ಷರು ತಿಳಿಸಿದರು.
ಓದಿ: ವೀಕೆಂಡ್ ಕರ್ಫ್ಯೂ ರದ್ದು: ನಿರ್ಣಯ ಸ್ವಾಗತಿಸಿದ ವ್ಯಾಪಾರಿಗಳ ಸಂಘಟನೆಗಳು