ಶಿವಮೊಗ್ಗ: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕಾಗಿ ಬಿಗಿ ಕ್ರಮ ಕೈಗೊಂಡಿದ್ದಕ್ಕಾಗಿ ಶಿವಮೊಗ್ಗದಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಆದರೆ, ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ ಎಂದಿರುವ ಆರೋಗ್ಯ ಸಚಿವರು, ಡೆಡ್ಲಿ ವೈರಸ್ ಕೊರೊನಾ ವಿರುದ್ಧದ ಸಮರ ದೀರ್ಘವಾಗಿದ್ದು, ಮುಂದಿನ 7-8 ತಿಂಗಳು ನಾವು ಅದರೊಂದಿಗೆ ಸಾಗಬೇಕಾಗಿರುವ ಕಾರಣ ಮಾನಸಿಕವಾಗಿ ಸಿದ್ಧರಾಗಿ ಎಂದಿದ್ದಾರೆ.
ಶಿವಮೊಗ್ಗದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವೈರಸ್ ಚಿಕಿತ್ಸೆಗಾಗಿ ಪ್ಲಾಸ್ಮಾ ಥೆರೆಪಿ ಟೆಸ್ಟಿಂಗ್ ಹಂತದಲ್ಲಿದ್ದು, ಅದು ಯಶಸ್ವಿಯಾದರೆ, ಎಲ್ಲ ಜಿಲ್ಲೆಗಳಲ್ಲೂ ಮುಂದುವರಿಸಲಾಗುವುದು ಎಂದಿದ್ದಾರೆ.
ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ಸಂಗ್ರಹ ಕಡಿಮೆ
ರಾಜ್ಯದ ವಿವಿಧ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ಸಂಗ್ರಹ ಕಡಿಮೆಯಾಗುತ್ತಿದ್ದು, ದಾನಿಗಳು ಮುಂದೆ ಬರಬೇಕು ಎಂದ ಅವರು, ಅದಕ್ಕಾಗಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಬೇಕು ಎಂದರು.
ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಇತರ ಸಿಬ್ಬಂದಿಗಳ ಬಾಕಿ ವೇತನ ಪಾವತಿಗಾಗಿ 80 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದೇ ರೀತಿ, ಇಲಾಖೆಯಲ್ಲಿ ವಿವಿಧ ಹಂತದಲ್ಲಿ ಸಿಬ್ಬಂದಿ ವೇತನ ತಾರತಮ್ಯ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಎಫ್‍ಡಿ ನಿಯಂತ್ರಣಕ್ಕೆ ವಿಶೇಷ ಪ್ರಯತ್ನ:
ಜಿಲ್ಲೆಯ ತಾಲೂಕುಗಳಲ್ಲಿ ಕಾಡುತ್ತಿರುವ ಕೆಎಫ್‍ಡಿ ಸಮರ್ಪಕ ನಿಯಂತ್ರಣಕ್ಕಾಗಿ ವಿಶೇಷ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಸಮಗ್ರವಾದ ಮಾಹಿತಿ ನೀಡಿದ್ದಾರೆ. ಕೆಎಫ್‍ಡಿಗೆ ಸೂಕ್ತ ಔಷಧ ಕಂಡು ಹಿಡಿಯುವುದು ಸೇರಿದಂತೆ ಈ ನಿಟ್ಟಿನಲ್ಲಿ ಆಗಬೇಕಾದ ಸಂಶೋಧನೆಗಳ ಸಮಾಲೋಚನೆಗಾಗಿ ಉನ್ನತ ಮಟ್ಟದ ಸಭೆ ಕರೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 168 ಕೆಎಫ್‍ಡಿ ಪ್ರಕರಣಗಳು ವರದಿಯಾಗಿದ್ದು, ತೀರ್ಥಹಳ್ಳಿಯಲ್ಲಿ 132 ಹಾಗೂ ಸಾಗರದಲ್ಲಿ 36 ಪ್ರಕರಣ ವರದಿಯಾಗಿದೆ. ಪ್ರಸ್ತುತ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ 5 ಸಾವಿರ ರಕ್ತ ಪರಿಶೋಧನೆ ನಡೆಸಲಾಗಿದೆ. 2 ಮಂಗಗಳಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಆಯನೂರು ಮಂಜುನಾಥ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.