ಶಿವಮೊಗ್ಗ: ಕೊರೊನಾ ವೈರಸ್ ಸುಳಿಗೆ ಸಿಲುಕಿ ದೇಶದ ಬಹುತೇಕ ಉದ್ಯಮಗಳು ಇದೀಗ ಮತ್ತೆ ತಮ್ಮ ಕಾರ್ಯವನ್ನು ಪ್ರಾರಂಭಿಸಿವೆ. ಆದರೆ, ವೈರಸ್ ಭೀತಿಗೆ ಸಿಲುಕಿರುವ ಜನ ಮಾತ್ರ ಸಂಚಾರಕ್ಕೆ ಹೊರಡಲು ಮುಂದಾಗದಿರುವುದರಿಂದ ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಇದನ್ನೇ ಅವಲಂಬಿಸಿರುವ ಟ್ಯಾಕ್ಸಿ ಹಾಗೂ ಹೋಟೆಲ್ ಉದ್ಯಮಕ್ಕೂ ಭಾರಿ ಹೊಡೆತ ಉಂಟಾಗಿದೆ.
ಕೋವಿಡ್ ನಿಂದ ಪ್ರವಾಸೋದ್ಯಮದ ಮೇಲೆ ಹೊಡೆತ: ಮಲೆನಾಡ ಹೆಬ್ಬಾಗಿಲೆಂದೇ ಪ್ರಖ್ಯಾತಿ ಪಡೆದ ಶಿವಮೊಗ್ಗದಲ್ಲಿ ಪ್ರವಾಸಿತಾಣಗಳು ಸಾಕಷ್ಟಿವೆ. ಹುಲಿ- ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ, ಆಗುಂಬೆ, ಮಂಡಗದ್ದೆ ಪಕ್ಷಿಧಾಮ, ಜೋಗ ಜಲಪಾತ, ಚಂದ್ರಗುತ್ತಿ, ಕೆಳದಿ- ಇಕ್ಕೇರಿ, ಶಿವಪ್ಪ ನಾಯಕ ಅರಮನೆ ಸೇರಿ ಸಾಕಷ್ಟು ಜಾಗಗಳಿಗೆ ಕೊರೊನಾ ವೈರಸ್ ಹಾವಳಿಗೂ ಮೊದಲು ಸಾಕಷ್ಟು ಮಂದಿ ಆಗಮಿಸಿ ಸಂಭ್ರಮಿಸುತ್ತಿದ್ದರು. ಆದ್ರೀಗ ಪರಿಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ.
ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಇದರಿಂದಾಗಿ ಪ್ರವಾಸೋದ್ಯಮ ಇಲಾಖೆ ವಾರ್ಷಿಕವಾಗಿ ಶೇ, 60ರಷ್ಟು ನಷ್ಟವನ್ನು ಅನುಭವಿಸಿದೆ. ಪ್ರತಿ ವರ್ಷ ಜಿಲ್ಲೆಗೆ ರಾಜ್ಯ, ದೇಶದ ವಿವಿದ ಮೂಲೆಗಳಿಂದ ಸುಮಾರು 15 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದರು. ಆದ್ರೆ ಈ ವರ್ಷ ಆಗಸ್ಟ್ ಅಂತ್ಯಕ್ಕೆ ಕೇವಲ 5 ಲಕ್ಷ ಜನ ಬಂದಿದ್ದಾರೆ ಎನ್ನಲಾಗಿದ್ದು,ಇದು ಪ್ರವಾಸೋದ್ಯಮದ ವಾರ್ಷಿಕ ನಷ್ಟವನ್ನು ಅಂದಾಜಿಸುತ್ತದೆ.
ಸರ್ಕಾರದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ: ಕೊರೊನಾಕ್ಕೆ ಭಯ ಪಟ್ಟು ಪ್ರವಾಸಕ್ಕೆ ಮುಂದಾಗದ ಜನರನ್ನು ಪ್ರವಾಸಿ ತಾಣಗಳತ್ತ ಸೆಳೆಯುವ ಉದ್ದೇಶದಿಂದ ಸರ್ಕಾರ ಈಗಾಗಲೇ ಹೊಸ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸೆಪ್ಟೆಂಬರ್ 27 ರಂದು ಜೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಯೋಜಿಸುತ್ತಿದೆ. ಆರೋಗ್ಯ ಇಲಾಖೆಯ ಗೈಡ್ ಲೈನ್ಸ್ ನಂತೆ ಸಾಕಷ್ಟು ಕ್ರಮ ತೆಗೆದುಕೊಂಡು ಪ್ರವಾಸೋದ್ಯಮದ ಚೇತರಿಕೆಗೆ ಅವಕಾಶ ಮಾಡಿ ಕೊಡಲಾಗುತ್ತಿದೆ. ಈ ಮೂಲಕ ಪ್ರವಾಸೋದ್ಯಮದ ಮೇಲೆ ಅವಲಂಬಿತರಾದ ಟ್ಯಾಕ್ಸಿ ಚಾಲಕರಿಗೆ ಹಾಗೂ ಹೋಟೆಲ್ ಉದ್ಯಮಕ್ಕೆ ನೆರವಾಗಲಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕರಾದ ರಾಮಕೃಷ್ಣ ,ಲಾಕ್ಡೌನ್ ಸಡಿಲಿಕೆಯ ನಂತರ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆಗಸ್ಟ್ನಲ್ಲೇ ಜೋಗಕ್ಕೆ 50 ಸಾವಿರ ಪ್ರವಾಸಿಗರು ಬಂದು ಹೋಗಿದ್ದಾರೆ ಎಂದರು.
ಹೋಟೆಲ್ ಉದ್ಯಮದವರಿಗೂ ಸಹಾಯ ನೀಡಿ: ಸರ್ಕಾರ ಕೋವಿಡ್ ನಿಂದ ಬಳಲಿದ ಟ್ಯಾಕ್ಸಿ ಚಾಲಕರಿಗೆ, ಮಡಿವಾಳರಿಗೆ, ಸವಿತಾ ಸಮಾಜದವರಿಗೆ ಸೇರಿದಂತೆ ಅನೇಕರಿಗೆ ಸಹಾಯ ಮಾಡಿದೆ. ಆದರೆ, ಹೋಟೆಲ್ ಉದ್ಯಮದವರನ್ನುಸಂಪೂರ್ಣವಾಗಿ ಮರೆತಿದೆ. ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮಗಳು ಒಂದಕ್ಕೊಂದು ಅವಲಂಬಿತವಾಗಿವೆ. ಸರ್ಕಾರ ಟ್ಯಾಕ್ಸಿ ಚಾಲಕರಿಗೆ ನೀಡಿದ ಉತ್ತೇಜನದ ರೀತಿಯಲ್ಲಿಯೇ ಹೋಟೆಲ್ ಉದ್ಯಮದವರಿಗೂ ಸಹ ಸಹಾಯ ಮಾಡಬೇಕಿದೆ. ಪ್ರವಾಸಿಗರು ಬಾರದೇ ಹೋದರೆ, ಹೋಟೆಲ್ ಉದ್ಯಮ ನಡೆಯುವುದೇ ಇಲ್ಲ ಎಂದು ಹೋಟೆಲ್ ಉದ್ಯಮಿ ಗೋಪಿನಾಥ್ ತಿಳಿಸಿದರು.