ಶಿವಮೊಗ್ಗ: ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಕೇವಲ 3 ಅಡಿ ಮಾತ್ರ ಬಾಕಿ ಇದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ ಇದ್ದು, ಇಂದು ಜಲಾಶಯದ ನೀರಿನ ಮಟ್ಟ 1816.10 ಇದೆ. ಕಳೆದ ನಾಲ್ಕೈದು ದಿನಗಳಿಂದ ಹೊಸನಗರ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಉತ್ತಮ ಒಳಹರಿವು ಹರಿದು ಬರುತ್ತಿದೆ. ಇಂದು ಜಲಾಶಯಕ್ಕೆ 19,206 ಕ್ಯೂಸೆಕ್ ನೀರು ಒಳ ಹರಿವು ಇದೆ.
ಸದ್ಯಕ್ಕೆ ವಿದ್ಯುತ್ ಬಳಕೆಗಾಗಿ 5,269 ಕ್ಯೂಸೆಕ್ ನೀರನ್ನು ಬಳಕೆ ಮಾಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಸಾಗರ ತಾಲೂಕಿನ ಜೋಗ ಜಲಪಾತಕ್ಕೂ ಮುನ್ನ ಲಿಂಗನಮಕ್ಕಿ ಗ್ರಾಮದ ಬಳಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.
ಈ ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಈ ಜಲಾಶಯದಿಂದ ಯಾವುದೇ ಕೃಷಿ ಚಟುವಟಿಕೆಗೆ ನೀರು ಬಳಸಿಕೊಳ್ಳಲಾಗುವುದಿಲ್ಲ. ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಬಿಟ್ಟರೆ ಜೋಗ ಜಲಪಾತದ ಮೂಲಕ ಹೊನ್ನಾವರದಿಂದ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟದ ಸಾಲಿನಲ್ಲಿ ಹುಟ್ಟುವ ನದಿಗಳಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವ ಏಕೈಕ ನದಿ ಈ ಶರಾವತಿಯಾಗಿದೆ.
ಶ್ರೀರಾಮ ವನವಾಸಕ್ಕೆ ಬಂದಾಗ ಸೀತೆ ಬಾಯಾರಿದೆ ಎಂದಾಗ ರಾಮ ತನ್ನ ಬಾಣ (ಅಂಬು)ದಿಂದ ನೆಲಕ್ಕೆ ಹೊಡೆದಾಗ ಹುಟ್ಟಿದ ನೀರೇ ಶರಾವತಿ. ನದಿ ಹುಟ್ಟಿದ ಸ್ಥಳಕ್ಕೆ ಅಂಬು ತೀರ್ಥ ಎಂದು ಕರೆಯುತ್ತಾರೆ.
ನದಿ ಪಾತ್ರದ ಜನತೆಗೆ ಎಚ್ಚರಿಕೆ ನೀಡಿದ ಕೆಪಿಸಿ: ಜಲಾಶಯ ತುಂಬಲು ಕೇವಲ 3 ಅಡಿ ಬಾಕಿ ಇರುವುದರಿಂದ ನದಿಗೆ ಜಲಾಶಯದಿಂದ ಯಾವಾಗ ಬೇಕಾದರೂ ನೀರು ಬಿಡುವುದರಿಂದ ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಬೇಕೆಂದು ಕೆಪಿಸಿ ಎಚ್ಚರಿಕೆ ನೀಡುತ್ತಿದೆ.