ಶಿವಮೊಗ್ಗ: ರಾಜ್ಯಕ್ಕೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಇನ್ನೇನು 5 ಅಡಿ ನೀರು ಬೇಕು. ಜಲಾಶಯ ಭರ್ತಿ ಆದರೆ ನೀರನ್ನು ಹೊರ ಬಿಡಲಾಗುತ್ತದೆ. ಹಾಗಾಗಿ ಕೆಪಿಸಿಯು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡುತ್ತಿದೆ.
ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸತತ ನಾಲ್ಕು ದಿನಗಳಿಂದ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1,819 ಅಡಿ ಆಗಿದ್ದು, ಸದ್ಯ ನೀರಿನ ಮಟ್ಟ 1,815.95 ತಲುಪಿದೆ.
ಜಲಾಶಯದ ಹಿನ್ನೀರಿನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೀರನ್ನು ಯಾವ ಸಮಯದಲ್ಲಾದ್ರೂ ಹೊರಕ್ಕೆ ಬಿಡಬಹುದು. ಕೆಪಿಸಿಯು ತಮ್ಮ ಇಲಾಖೆಯ ಜೀಪ್ಗೆ ಮೈಕ್ ಕಟ್ಟಿ ನದಿ ಪಾತ್ರದ ಗ್ರಾಮಗಳಲ್ಲಿ ಯಾರೂ ಸಹ ನದಿಗೆ ಇಳಿಯುವುದು, ಜಾನುವಾರುಗಳನ್ನು ಮೇಯಿಸಲು ಕಳುಹಿಸಬಾರದು ಎಂದು ಜನರಿಗೆ ತಿಳಿಸುತ್ತಿದೆ. ಲಿಂಗನಮಕ್ಕಿ ಜಲಾಶಯ ಕಳೆದ ವರ್ಷವೂ ಸಹ ಭರ್ತಿಯಾಗಿತ್ತು.