ಶಿವಮೊಗ್ಗ : ಕೊರೊನಾ ಸೋಂಕಿತರ ಮನೋಸ್ಥೈರ್ಯ ಹೆಚ್ಚಿಸುವ ಸಲುವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಮ ಸ ನಂಜುಂಡಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯ ಕೊರೊನಾ ವಾರ್ಡ್ನಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತಿದ್ದೇವೆ. ಸರ್ಕಾರದ ಅನುಧಾನವಿಲ್ಲದೇ ವೈದ್ಯರು, ಸಾಹಿತಿಗಳ ಹಾಗೂ ಸಾರ್ವಜನಿಕರ ಸಹಾಯದಿಂದ ಗ್ರಂಥಾಲಯ ಪ್ರಾರಂಬಿಸುತ್ತೇವೆ ಎಂದರು.
ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಕುಟುಂಬಸ್ಥರ ಭೇಟಿ ಆಗಲು ಆಗದೇ ಅನೇಕರು ಏಕಾಂಗಿತನದಿಂದ ಆತ್ಮವಿಶ್ವಾಸ ಕುಗ್ಗಿ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ, ಗ್ರಂಥಾಲಯ ಪ್ರಾರಂಭಿಸಿ ಪುಸ್ತಕಗಳು, ದಿನಪತ್ರಿಕೆಗಳನ್ನ ಇಡಲಾಗುತ್ತದೆ.
ಅ.9ನೇ ತಾರೀಖು ಗ್ರಂಥಾಲಯ ಆರಂಭವಾಗಲಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಸಂಸದರು ಹಾಗೂ ವೈದ್ಯರ ಸಹಕಾರ ಇದೆ ಎಂದು ತಿಳಿಸಿದರು. ಕೊರೊನಾ ವಾರಿಯರ್ಸ್ಗಳನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು, ವಿಶ್ವ ಸಂಸ್ಥೆಯ ಆರೋಗ್ಯ ದಿನಾಚರಣೆಯ ದಿನದಂದು ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದು ಮನವಿ ಮಾಡಿದರು.