ಶಿವಮೊಗ್ಗ: ಸುಮಾರು 5 ವರ್ಷದ ಚಿರತೆ ಅರಣ್ಯ ಇಲಾಖೆಯರವರು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಜಿಲ್ಲೆಯ ದಿಗ್ಗೆನಹಳ್ಳಿಯಲ್ಲಿ ನಡೆದಿದೆ. ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಗಡಿಭಾಗದಲ್ಲಿರುವ ದಿಗ್ಗೆನಹಳ್ಳಿ ಗ್ರಾಮಸ್ಥರಿಗೆ ಕಳೆದ ಹಲವು ದಿನಗಳಿಂದ ಚಿರತೆ ತೊಂದರೆ ನೀಡುತ್ತಿತ್ತು.
ದಿಗ್ಗೆನಹಳ್ಳಿ ಪಕ್ಕದಲ್ಲಿ ನೀಲಗಿರಿ ಪ್ಲಾಂಟೇಷನ್ ಇದ್ದು, ಇಲ್ಲಿ ಚಿರತೆ ಬಿಡು ಬಿಟ್ಟಿತ್ತು. ಗ್ರಾಮಕ್ಕೆ ಆಗಾಗ್ಗೆ ನುತಗ್ಗಿ ಬಂದು ಕರುಗಳು ಹಾಗೂ ನಾಯಿಗಳನ್ನು ಕದ್ದು ಕೊಂಡೊಯ್ಯುತ್ತಿತ್ತು. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಕಳೆದೊಂದು ವಾರದ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಾಗಿ ಬೋನು ಇಟ್ಟಿದ್ದರು. ಪರಿಣಾಮ ಇಂದು ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿರಾಳರಾಗಿದ್ದಾರೆ.
ಚಿರತೆಯನ್ನು ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ತಂದುಬಿಡುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ಡಿಸಿಎಫ್ ಪೂವಯ್ಯ ಈಟಿವಿ ಭಾರತ್ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.