ಶಿವಮೊಗ್ಗ; ರಾಜಕಾರಣಿಗಳು ಭಾಷಣ, ಮೀಟಿಂಗ್ ಮಾಡುವುದನ್ನು ಬಿಟ್ಟು ಒಂದು ದಿನವಾದರೂ ಕೊರೊನಾ ಸೋಂಕಿತರ ಬಳಿ ಹೋಗಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಸೇವೆ ಮಾಡಿ ಎಂದು ಜನರು ಮತ ಹಾಕಿ ಗೆಲ್ಲಿಸುತ್ತಾರೆ. ಈಗ ಕೊರೊನಾ ಸೋಂಕಿತರಾಗಿರುವುದು ಸಹ ಮತದಾರರೇ. ಹಾಗಾಗಿ ಪಿಪಿಇ ಕಿಟ್ ಧರಿಸಿ ರಾಜಕಾರಣಿಗಳು ಕೋವಿಡ್ ಸೋಂಕಿತರ ಸಮಸ್ಯೆಗಳನ್ನ ಆಲಿಸಬೇಕು ಹಾಗೂ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದರು.
ರಾಜ್ಯ ಸರ್ಕಾರ ಕೊರೊನಾ ವಾರಿಯರ್ಸ್ಗಳಿಗೆ ಸಂಬಳ ನೀಡಿಲ್ಲ. ಹಾಗಾಗಿ ಕೂಡಲೇ ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. ರಾಜಕಾರಣಿಗಳು ಯಾರೂ ಬಡವರಲ್ಲ, ಹಾಗಾಗಿ ಬೇಕಾದರೆ ಶಾಸಕರ ವೇತನ ಕಟ್ ಮಾಡಿ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಗೆ ನೇಮಿಸಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಇಲ್ಲಿವರೆಗೂ ಎಷ್ಟು ಬಾರಿ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಹಾಗೂ ಅವರ ಸಮಸ್ಯೆಯನ್ನು ಆಲಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಕೇಳಬೇಕು. ಅಧಿಕಾರಿಗಳು ರಾಜಕಾರಣಿಗಳು ಕೇವಲ ಮೀಟಿಂಗ್ ಮಾಡುತ್ತಿದ್ದಾರೆ ಹೊರತು, ಇಲ್ಲಿಯವರೆಗೆ ಸೋಂಕಿತರ ಸಮಸ್ಯೆಯನ್ನು ಆಲಿಸುವುದಾಗಲಿ ಅವರಿಗೆ ಆತ್ಮಸ್ಥೈರ್ಯ ತುಂಬುವುದಾಗಲಿ ಯಾರೂ ಮಾಡಿಲ್ಲ ಎಂದು ದೂರಿದರು.