ಶಿವಮೊಗ್ಗ: ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ಬಾರದ ವೈದ್ಯರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಶಾಸಕ ಹರತಾಳು ಹಾಲಪ್ಪ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಜನ ಸಾಲುಗಟ್ಟಿ ನಿಂತಿರುವುದನ್ನು ಗಮನಿಸಿ ವಿಚಾರಿಸಿದಾಗ ಯಾವ ವೈದ್ಯರೂ ಸಹ ಸಮಯಕ್ಕೆ ಸರಿಯಾಗಿ ಬಾರದೆ ಇರುವುದು ತಿಳಿದು ಬಂದಿದೆ. ಇದರಿಂದ ಕೋಪಗೊಂಡ ಶಾಸಕರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಪ್ರಕಾಶ್ ಬೋಸ್ಲೆ ಅವರನ್ನು ಕರೆಯಿಸಿ, ಯಾಕೆ ವೈದ್ಯರು ತಡವಾಗಿ ಆಗಮಿಸುತ್ತಿದ್ದಾರೆ?, ಯಾರು ಯಾರು ತಡವಾಗಿ ಆಗಮಿಸುತ್ತಿದ್ದಾರೆ ಎಂದು ಮಾಹಿತಿ ಪಡೆದುಕೊಂಡರು.
ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಅವರಿಗೆ ಕರೆ ಮಾಡಿ ರೋಗಿಗಳನ್ನು ಕಾಯಿಸುವುದನ್ನು ಬಿಟ್ಟು ವೈದ್ಯರು ಸರಿಯಾದ ಸಮಯಕ್ಕೆ ಬರುವಂತೆ ಆಗಬೇಕು. ಇಲ್ಲವೇ ವೈದ್ಯರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಖಡಕ್ ಸೂಚನೆ ನೀಡಿದರು.