ಶಿವಮೊಗ್ಗ : ಮತದಾನದ ಪ್ರಮಾಣ ಹೆಚ್ಚಳ ಮಾಡಲು ಹಾಗೂ ಮತದಾರರನ್ನು ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗ ನೋಟಾವನ್ನು ಜಾರಿಗೆ ತಂದಿದೆ. ಆದರೆ ಶಿವಮೊಗ್ಗದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ನೋಟಾ ಬಿಟ್ಟು ವೋಟ್ ಹಾಕಿ ಅಂತ ಪ್ರಚಾರ ಮಾಡ್ತಾ ಇದ್ದಾರೆ.
ಶಿವಮೊಗ್ಗದ ನಿವೃತ್ತ ಡಿವೈಎಸ್ಪಿ ರಾಮಚಂದ್ರ ಮಾಳದೇವರ ತಮ್ಮ ಹೊಸ ಬಲಾನೊ ಕಾರಿನ ಮೇಲೆ‘ದಯಮಾಡಿ NOTA ಮತದಾನ ಬೇಡ’ ಪ್ರಜಾಪ್ರಭುತ್ವ ದೇಗುಲಕ್ಕೆ ಯೋಗ್ಯ ವ್ಯಕ್ತಿಯನ್ನು ಚುನಾಯಿಸಲು ಪ್ರತಿಯೊಬ್ಬರು ನಿಮ್ಮ ಹಕ್ಕು ಎಂದು ಮತದಾನ ಚಲಾಯಿಸಿ. ನಿಮ್ಮಿಂದ ಮತದಾನ, ಸುಭದ್ರ ಸರ್ಕಾರದ ಸೋಪಾನ. ಮತದಾನ ದಿನ ರಜೆಯಂದು, ವಿನೋದ, ವಿಹಾರ ಬೇಡ ಎಂಬ ಸ್ಲೋಗನ್ ಹಾಕಿ ಕೊಂಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು. ಇಂಥ ಪ್ರಜೆಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮಗೆ ಇಷ್ಟವಿಲ್ಲ. ಇದರಿಂದ ನಾವು ಮತದಾನ ಮಾಡಿಲ್ಲ ಎಂದು ಹೇಳುವವರೆ ಹೆಚ್ಚು. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. 5 ವರ್ಷಕ್ಕೊಮ್ಮೆ ಸಿಗುವ ಹಕ್ಕನ್ನು ಕಳೆದು ಕೊಳ್ಳದೆ, ತಪ್ಪದೆ ಮತದಾನ ಮಾಡಬೇಕು ಎಂಬ ದೃಷ್ಟಿಯಿಂದ ಚುನಾವಣಾ ಆಯೋಗ ನೋಟಾ ಜಾರಿಗೆ ತಂದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾರು ತನಗೆ ಇಷ್ಟವಿಲ್ಲ ಎಂದು ಹೇಳಲು ನೋಟಾ ಅವಕಾಶ ನೀಡಿದೆ. ಆದ್ರೆ ರಾಮಚಂದ್ರ ಮಾಳದೇವರ ರವರ ಪ್ರಕಾರ ನೋಟಾ ಮುಂದೊಂದು ದಿನ ಬ್ಲಾಕ್ ಮೇಲ್ಗೆ ದಾರಿ ಮಾಡಿ ಕೊಡಬಹುದು. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿರುವವರಲ್ಲಿಯೇ ಉತ್ತಮರಿಗೆ ಮತದಾನ ಮಾಡಬೇಕಿದೆ. ಇದರಿಂದ ಪ್ರಜಾಪ್ರಭುತ್ವ ಬೆಳೆಯುತ್ತದೆ. ಇದರಿಂದ ಎಲ್ಲರು ಮತದಾನ ಮಾಡಬೇಕು ಎಂಬುದು ಇವರ ವಾದವಾಗಿದೆ.
ಇವರ ಈ ಕಾರ್ಯಕ್ಕೆ ಹಲವಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಕಾರು ತೆಗೆದುಕೊಂಡು ಹೋಗುವಾಗ ಹಾಗೂ ಕಾರು ನಿಲ್ಲಿಸಿದಾಗ ಹಲವಾರು ಜನ ಕಾರಿನ ಬಳಿ ಬಂದು ಅಚ್ಚರಿ ಇಂದ ನೋಡುತ್ತಾರೆ. ಯಾರು ಇದರ ಬಗ್ಗೆ ಪ್ರಶ್ನೆ ಮಾಡುತ್ತಾರೋ ಅವರಿಗೆ ಮಾಳದೇವರ ಸೂಕ್ತವಾಗಿ ಉತ್ತರ ನೀಡುತ್ತಾರೆ. ಒಟ್ಟಾರೆ, ರಾಮಚಂದ್ರ ಮಾಳದೇವರ ಮತದಾನದ ಜಾಗೃತಿಯ ಬಗ್ಗೆ ಪ್ರಚಾರ ಮೂಡಿಸುತ್ತಿರುಚುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.